Thursday, December 18, 2025

RCB ಪಾಳಯಕ್ಕೆ ‘KKR ಸ್ಟಾರ್’ ಎಂಟ್ರಿ: 7 ಕೋಟಿಗೆ ಸ್ಟಾರ್ ಆಟಗಾರ ಖರೀದಿಸಿದ ಬೆಂಗಳೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಹರಾಜು ಪ್ರಕ್ರಿಯೆಯು ಮಹತ್ವದ ತಿರುವು ಪಡೆದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ ₹7 ಕೋಟಿ ನೀಡಿ ಸ್ಟಾರ್ ಆಲ್-ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಕಳೆದ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರರಾಗಿದ್ದ ವೆಂಕಟೇಶ್ ಅಯ್ಯರ್, ಈ ಬಾರಿ ಕೆಂಪು-ಚಿನ್ನದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 17 ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ಹರಾಜಿನಲ್ಲಿ 16.40 ಕೋಟಿ ಮೊತ್ತದೊಂದಿಗೆ ಕಾಣಿಸಿಕೊಂಡಿದ್ದ RCB, ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿದ ನಂತರ ತನ್ನ ಪರ್ಸ್‌ನ ಮೊತ್ತವನ್ನು ಕಡಿಮೆ ಮಾಡಿಕೊಂಡಿದೆ.

IPL ನಿಯಮಗಳ ಪ್ರಕಾರ, ಒಂದು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ. RCB ತಂಡಕ್ಕೆ ಈ ಬಾರಿ ಇನ್ನೂ 7 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಕಳೆದ ಬಾರಿ 22 ಆಟಗಾರರ ತಂಡವನ್ನು ರೂಪಿಸಿದ್ದ ಆರ್​ಸಿಬಿ, ಈ ಸೀಸನ್‌ನಲ್ಲಿ ಹೆಚ್ಚುವರಿ ಆಟಗಾರರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿದ ಹಣದಲ್ಲಿ ಯಾವ ರೀತಿಯ ರಣತಂತ್ರ ರೂಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

RCB ತಂಡದ ಇತ್ತೀಚಿನ ಪಟ್ಟಿ:

ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ದಾರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್.

error: Content is protected !!