ಹೊಸದಿಗಂತ ಯಾದಗಿರಿ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ವಿಭಾಗಕ್ಕೆ ಸೇರಿದ ಬಸ್ಸೊಂದು ಮಹಾರಾಷ್ಟ್ರದ ರಾವೂ ಘಾಟ್ ಬಳಿ ಭಾನುವಾರ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಯಾದಗಿರಿಯಿಂದ ಸಾತಾರಕ್ಕೆ ತೆರಳುತ್ತಿದ್ದ ಈ ಬಸ್, ಎದುರಿಗೆ ಬಂದ ಟ್ಯಾಂಕರ್ ಒಂದನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಪಕ್ಕಕ್ಕೆ ಉರುಳಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಬಸ್ ಚಾಲಕನ ಎರಡೂ ಕಾಲುಗಳು ಮುರಿದಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಬಸ್ಸಿನಲ್ಲಿದ್ದ ಇಬ್ಬರು ಮಕ್ಕಳಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಹಾರಾಷ್ಟ್ರ ಪೊಲೀಸರು ಮತ್ತು ಸ್ಥಳೀಯರು, ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಯಾದಗಿರಿ ಡಿಪೋದಿಂದ ನಿತ್ಯವೂ ಸಂಚರಿಸುವ ಈ ಬಸ್, ಘಾಟ್ ಪ್ರದೇಶದಲ್ಲಿ ಓವರ್‌ಟೇಕ್ ಮಾಡುವ ಭರದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

