ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹೈನುಗಾರಿಕಾ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈ ವರ್ಷ ದಾಖಲೆ ಮಟ್ಟದ ಸಾಧನೆ ದಾಖಲಿಸಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ನಂದಿನಿ ಬ್ರಾಂಡ್‌ನ ಸಿಹಿತಿನಿಸುಗಳಿಗೆ ಗ್ರಾಹಕರಿಂದ ಅಪಾರ ಪ್ರತಿಕ್ರಿಯೆ ದೊರೆತಿದ್ದು, ಇದರ ಫಲವಾಗಿ ಸಂಸ್ಥೆ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ, ಒಟ್ಟು ರೂ. 46 ಕೋಟಿ ವಹಿವಾಟು ಸಾಧಿಸಿವೆ. ಈ ಸಾಧನೆ ಕಳೆದ ಸಾಲಿನಿಗಿಂತ ಶೇ.38ರಷ್ಟು ಹೆಚ್ಚಿದ್ದು, ಕೆಎಂಎಫ್ ಇತಿಹಾಸದಲ್ಲಿ ಸರ್ವಕಾಲಿಕ ದಾಖಲೆಯಾಗಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಕೆಎಂಎಫ್ ರಾಜ್ಯದ ಹೈನುಗಾರ ರೈತರ ಬದುಕು ಸುಧಾರಿಸಲು ಐದು ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದು, ಪ್ರತಿದಿನ ಸುಮಾರು 1 ಕೋಟಿ ಲೀಟರ್ ಹಾಲು ಸಂಗ್ರಹಿಸುತ್ತದೆ. ನಂದಿನಿ ಬ್ರಾಂಡ್‌ನಡಿಯಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಮತ್ತು 40 ಕ್ಕೂ ಹೆಚ್ಚು ಸಿಹಿತಿನಿಸುಗಳು ಸೇರಿದಂತೆ 175ಕ್ಕೂ ಹೆಚ್ಚು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ದೇಶೀಯ ಮಾರುಕಟ್ಟೆಯಷ್ಟೇ ಅಲ್ಲದೆ, ನಂದಿನಿ ಉತ್ಪನ್ನಗಳು ಈಗ ವಿದೇಶಗಳಲ್ಲಿಯೂ ಜನಪ್ರಿಯತೆ ಗಳಿಸುತ್ತಿವೆ. ಹಾಲು ಉತ್ಪನ್ನಗಳ ಶುದ್ಧತೆ, ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯು ನಂದಿನಿಯನ್ನು ಗ್ರಾಹಕರ ವಿಶ್ವಾಸದ ಪ್ರತೀಕವನ್ನಾಗಿ ಮಾಡಿದೆ. ಈ ಬಾರಿ 2025ರ ಹಬ್ಬದ ಅವಧಿಗೆ ಮುಂಚಿತವಾಗಿ ರೂಪಿಸಿದ ಸೂಕ್ತ ಯೋಜನೆಯ ಫಲವಾಗಿ ನಿರೀಕ್ಷೆಗೂ ಮೀರಿದ ಮಾರಾಟ ಸಾಧನೆ ಸಾಧ್ಯವಾಯಿತು ಎಂದು ಸಚಿವರು ತಿಳಿಸಿದ್ದಾರೆ.