ಹೊಸದಿಗಂತ ವರದಿ, ಮಡಿಕೇರಿ:
ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ,ಸರಬರಾಜು ಮಾಡುತ್ತಿದ್ದ ಮೈಸೂರಿನ ನಾಲ್ವರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಶಾಂತಿ ನಗರದ ಹರ್ಷದ್ ಖಾನ್ (25), ಅಜಿತ್ ಸೇಠ್ ನಗರದ ಬಿ.ಡಿ.ಕಾಲೋನಿಯ ಮುಜಾಮಿಲ್ ಅಹಮ್ಮದ್( 46 ) ಅಫ್ಸಲ್ ಪಾಷ (28) ಹಾಗೂ ಕಲ್ಯಾಣ ಗಿರಿಯ ಸಾಕ್ಯೂಬ್ ( 32) ಎಂಬವರೇ ಬಂಧನಕ್ಕೊಳಗಾದವರಾಗಿದ್ದು, ಆರೋಪಿಗಳಿಂದ 1. 576 ಗ್ರಾಂ ಗಾಂಜಾ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಜಿ ಗ್ರಾಮದ ಹೆಗ್ಗಳ ಜಂಕ್ಷನ್ ಸಮೀಪ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ,ಸರಬರಾಜು ಕುರಿತು ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಮಂಗಳವಾರ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 20(b) NDPS Act ಅಡಿಯಲ್ಲಿ ಪ್ರಕರಣ ದಾಖಲಿಸ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವೀರಾಜಪೇಟೆ ಉಪ ವಿಭಾಗದ ಡಿವೈ ಎಸ್ಪಿ ಮಹೇಶ್ ಕುಮಾರ್,ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್ಐ ಪ್ರಮೋದ್, ಎಎಸ್ಐ ಮಂಜುನಾಥ.ಟಿ.ಪಿ, ಸಿಬ್ಬಂದಿಗಳಾದ ಹೇಮಂತ್ ಕುಮಾರ.ಬಿ.ಎಂ, ತೇಜಸ್ ಕುಮಾರ್, ಹರೀಶ್ ಎನ್.ಆರ್, ಸಾಗರ್ ಎನ್.ಎಸ್, ಕುಮಾರ.ಜಿ, ಮುದಿಯಜ್ಜಳ ಭೀಮಾಜ್ಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕು। ಬಿಂದುಮಣಿ.ಆರ್.ಎನ್. ಅವರು ಶ್ಲಾಘಿಸಿದ್ದಾರೆ.



