Wednesday, January 7, 2026

ಕೋಗಿಲು ಲೇಔಟ್ ವಿವಾದ: BBMP ಜಾಗದಲ್ಲಿ ಹಕ್ಕುಪತ್ರ ಅಸಾಧ್ಯ, ಬಡವರಿಗೆ ಪರ್ಯಾಯ ವಸತಿ ಭರವಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

“ಕೋಗಿಲು ಲೇಔಟ್‌ನಲ್ಲಿ ನಿರ್ಮಾಣವಾಗಿರುವ ಮನೆಗಳು ಅನಧಿಕೃತ ಎನ್ನುವುದು ಸತ್ಯ. ಇದು ಕಂದಾಯ ಇಲಾಖೆಗೆ ಸೇರಿದ್ದಲ್ಲ, ಬದಲಿಗೆ ಬಿಬಿಎಂಪಿ ಜಾಗವಾಗಿದೆ. ಸರ್ಕಾರಿ ಅಥವಾ ಬಿಬಿಎಂಪಿ ಜಾಗ ಒತ್ತುವರಿ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಖಡಕ್ ಆಗಿ ತಿಳಿಸಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ನಗರಕ್ಕೆ ಮರಳಿದ ಸಚಿವರು, ಇಂದು ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿಸ್ತೃತವಾಗಿ ಮಾತನಾಡಿದರು.

ಸರ್ಕಾರಿ ಜಾಗಗಳ ಸಂರಕ್ಷಣೆ ಆಡಳಿತದ ನಿರಂತರ ಪ್ರಕ್ರಿಯೆ. ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಕೋಗಿಲು ಲೇಔಟ್ ಪ್ರಕರಣವೂ ಇದರ ಒಂದು ಭಾಗವಾಗಿದೆ ಎಂದು ಸಚಿವರು ವಿವರಿಸಿದರು.

ತೆರವು ಮಾಡಲಾದ ಜಾಗದಲ್ಲಿ ಬಹಳ ಕಾಲದಿಂದ ವಾಸವಿದ್ದ ಅರ್ಹ ಬಡವರ ಸ್ಥಿತಿಯನ್ನು ಪರಿಗಣಿಸಿ, ಮುಖ್ಯಮಂತ್ರಿಗಳು ಮಾನವೀಯ ದೃಷ್ಟಿಯಿಂದ ಅವರಿಗೆ ಪರ್ಯಾಯ ಮನೆಗಳನ್ನು ನೀಡಲು ನಿರ್ಧರಿಸಿದ್ದಾರೆ.

ಇಲ್ಲಿ ಬಾಂಗ್ಲಾದೇಶದವರು ನೆಲೆಸಿದ್ದಾರೆ ಎಂಬುದು ಕೇವಲ ಊಹಾಪೋಹ. ಇಂತಹ ಗಂಭೀರ ವಿಷಯಗಳ ಬಗ್ಗೆ ಆಧಾರರಹಿತ ಹೇಳಿಕೆ ನೀಡಬಾರದು. ವಾಸವಿದ್ದವರು ರಾಜ್ಯದವರೇ ಅಥವಾ ಹೊರ ರಾಜ್ಯದವರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿ ಎಂದು ಅವರು ಸವಾಲು ಹಾಕಿದರು.

ಸಚಿವರು ವಿದೇಶ ಪ್ರವಾಸದಲ್ಲಿದ್ದ ಕಾರಣ ಕೋಗಿಲು ಲೇಔಟ್ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಕೊಂಚ ವಿಳಂಬವಾಗಿತ್ತು. ಸ್ಥಳೀಯ ಶಾಸಕರೂ ಆಗಿರುವ ಸಚಿವರ ಅಭಿಪ್ರಾಯ ಪಡೆದು, ಅರ್ಹರಿಗೆ ನಿವೇಶನ ಅಥವಾ ಮನೆ ಹಂಚಿಕೆ ಮಾಡಲು ಸರ್ಕಾರ ಇದೀಗ ಸಿದ್ಧತೆ ನಡೆಸಿದೆ.

error: Content is protected !!