ಹೊಸದಿಗಂತ ವರದಿ, ಕಲಬುರಗಿ:
ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಹೊಂದಿರುವ ಕೊಪ್ಪಳ ಗವಿಸಿದ್ದೇಶ್ವರರ ಜಾತ್ರಾ ಮಹೋತ್ಸವಕ್ಕೆ (ಗವಿ ಅಜ್ಜನ ಜಾತ್ರೆ)ಗೆ ಬರುವ ಭಕ್ತಾದಿಗಳ ಮಹಾಪ್ರಸಾದಕ್ಕಾಗಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಾಗರಗುಂಡಗಿ ಗ್ರಾಮಸ್ಥರಿಂದ ಈ ಬಾರಿ ೪೫ ಕ್ವಿಂಟಾಲ್ ತೊಗರಿ ಬೆಳೆ ಕೊಡುವ ಮೂಲಕ ಭಕ್ತರು ಗವಿ ಅಜ್ಜನಿಗೆ ಭಕ್ತಿಯ ಸಮರ್ಪಣಾ ಭಾವ ಅರ್ಪಿಸಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಹಾಗರಗುಂಡಗಿ ಗ್ರಾಮ, ಕೊಪ್ಪಳ ಗವಿಮಠದ ೧೮ನೇ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಜನ್ಮಸ್ಥಳವಾಗಿದ್ದು, ಕೊಪ್ಪಳದಲ್ಲಿ ಪ್ರತಿ ವರ್ಷ ನಡೆಯುವ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ನಾನಾ ರೀತಿಯ ಸೇವೆ ಮಾಡುತ್ತಾ ಬಂದಿರುವ ಗ್ರಾಮಸ್ಥರು,ಈ ಬಾರಿ ಇಡೀ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹ ಮಾಡುವ ಮೂಲಕ ೧೫೧ ತೊಗರಿ ಬೆಳೆಯ ಚೀಲ(೩೦ಕೆಜಿ)ಯುಳ್ಳ ಒಟ್ಟು ೪೫ ಕ್ವಿಂಟಾಲ್ ತೊಗರಿ ಬೆಳೆ ಅರ್ಪಣೆ ಮಾಡಿದ್ದಾರೆ.
ಕಳೆದ ೨೦೨೫ರಲ್ಲಿ ನಡೆದ ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಇಡೀ ಗ್ರಾಮಸ್ಥರಿಂದ ೧೫ ಕ್ವಿಂಟಾಲ್ ಶೇಂಗಾ ಹಿಂಡಿ (ಚಟ್ನಿ) ಕಳುಹಿಸಲಾಗಿತ್ತು.ಕೊಪ್ಪಳ ಗವಿಸಿದ್ದೇಶ್ವರರ ಜಾತ್ರೆ,ಹಾಗರಗುಂಡಗಿ ಗ್ರಾಮಸ್ಥರಿಗೆ ನಮ್ಮೂರ ಜಾತ್ರೆ ಎಂಬಂತೆ ಪ್ರತಿ ವರ್ಷ ತಮ್ಮ ಕೈಯಿಂದ ಆಗುವ ಸೇವೆಯನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ವಿಶೇಷ.

