ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಿಕ್ಷಾಟನೆ ಎಂದರೆ ಬಡತನದ ಸಂಕೇತ ಎನ್ನುವ ಸಾಮಾನ್ಯ ಕಲ್ಪನೆಗೆ ಇಂದೋರ್‌ನಲ್ಲಿ ನಡೆದ ಒಂದು ಘಟನೆ ದೊಡ್ಡ ಪ್ರಶ್ನಾರ್ಧಕ ಚಿಹ್ನೆಯಾಗಿದೆ. ನಗರವನ್ನು ಭಿಕ್ಷುಕ ಮುಕ್ತಗೊಳಿಸುವ ಉದ್ದೇಶದಿಂದ ಆರಂಭಿಸಿದ ವಿಶೇಷ ಅಭಿಯಾನದ ವೇಳೆ, ಬೀದಿಗಳಲ್ಲಿ ಭಿಕ್ಷೆ ಬೇಡುವ ಅಂಗವಿಕಲ ವ್ಯಕ್ತಿಯೊಬ್ಬರು ಕೋಟ್ಯಾಧಿಪತಿ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡ ನಡೆಸಿದ ಪರಿಶೀಲನೆಯಲ್ಲಿ, ಮಂಗಿಲಾಲ್ ಎಂಬ ವ್ಯಕ್ತಿ ಪ್ರತಿದಿನ ಸರಾಸರಿ 500ರಿಂದ 1,000 ರೂ.ವರೆಗೆ ಭಿಕ್ಷಾಟನೆಯಿಂದ ಗಳಿಸುತ್ತಿದ್ದಾನೆ ಎಂಬುದು ಪತ್ತೆಯಾಗಿದೆ. ಇದರ ಜೊತೆಗೆ, ಆತನ ಆರ್ಥಿಕ ಸ್ಥಿತಿ ಬಡತನದಿಂದ ಬಹಳ ದೂರದಲ್ಲಿದೆ ಎಂಬ ಅಂಶ ಅಧಿಕಾರಿಗಳನ್ನು ಆಶ್ಚರ್ಯಕ್ಕೆ ಗುರಿಮಾಡಿದೆ.
ಅಭಿಯಾನದಲ್ಲಿ ಸಂಗ್ರಹವಾದ ಮಾಹಿತಿಯಂತೆ, ಮಂಗಿಲಾಲ್ ಇಂದೋರ್‌ನ ವಿವಿಧ ಪ್ರದೇಶಗಳಲ್ಲಿ ಮೂರು ಮನೆಗಳನ್ನು ಹೊಂದಿದ್ದು, ಮೂರು ಆಟೋ ರಿಕ್ಷಾ ಮತ್ತು ಒಂದು ಮಾರುತಿ ಡಿಜೈರ್ ಕಾರನ್ನು ಬಾಡಿಗೆಗೆ ನೀಡುತ್ತಿದ್ದಾನೆ. ಅಲ್ಲದೆ, ಸರಾಫಾ ಬಜಾರ್ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಬಡ್ಡಿಗೆ ಹಣ ಸಾಲ ನೀಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ.
ಇಷ್ಟೆಲ್ಲ ಸಂಪತ್ತಿದ್ದರೂ, ಅವನು ಭಿಕ್ಷಾಟನೆ ನಿಲ್ಲಿಸಿಲ್ಲ ಎಂಬುದೇ ಅಧಿಕಾರಿಗಳ ಆತಂಕ. ಈಗಾಗಲೇ ಮನೆ ಹೊಂದಿದ್ದರೂ, ಸರ್ಕಾರದ ಗೃಹ ಯೋಜನೆಯಡಿ ಮತ್ತೊಂದು ಮನೆ ಪಡೆದಿರುವ ಕುರಿತು ಜಿಲ್ಲಾಧಿಕಾರಿಗಳ ಮುಂದೆ ವಿಚಾರಣೆ ನಡೆಯಲಿದೆ.
ಫೆಬ್ರವರಿ 2024ರಿಂದ ಇಂದೋರ್‌ನಲ್ಲಿ ನಡೆಯುತ್ತಿರುವ ಭಿಕ್ಷುಕ ನಿರ್ಮೂಲನಾ ಅಭಿಯಾನದಲ್ಲಿ ಇದುವರೆಗೆ 6,500ಕ್ಕೂ ಹೆಚ್ಚು ಭಿಕ್ಷುಕರನ್ನು ಗುರುತಿಸಲಾಗಿದ್ದು, ಸುಮಾರು 5,000 ಜನರಿಗೆ ಪುನರ್ವಸತಿ ಒದಗಿಸಲಾಗಿದೆ. ಈ ಘಟನೆ, ಭಿಕ್ಷಾಟನೆಯ ಹಿಂದೆ ಇರುವ ನಿಜವಾದ ಚಿತ್ರಣವನ್ನು ಸಮಾಜದ ಮುಂದಿಟ್ಟಿದೆ.


