Monday, November 3, 2025

ಆಸ್ಟ್ರೇಲಿಯಾ ತೊರೆದು ತವರಿಗೆ ಹಾರಿದ ಕುಲ್ದೀಪ್ ಯಾದವ್: ಬಿಸಿಸಿಐ ದಿಢೀರ್ ನಿರ್ಧಾರಕ್ಕೆ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಗೆಲುವು ದಾಖಲಿಸಿದ ಟೀಂ ಇಂಡಿಯಾಕ್ಕೆ ಅಚ್ಚರಿಯ ಆಘಾತ ಎದುರಾಗಿದೆ. ಮೂರನೇ ಟಿ20 ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿರದ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಅವರನ್ನು ಈಗ ಸಂಪೂರ್ಣವಾಗಿ ಟಿ20 ತಂಡದಿಂದಲೇ ಬಿಡುಗಡೆ ಮಾಡಲಾಗಿದೆ.

ಬಿಸಿಸಿಐ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಕುಲ್ದೀಪ್ ಯಾದವ್ ಅವರನ್ನು ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ನಡೆಯಲಿರುವ ಎರಡನೇ ನಾಲ್ಕು ದಿನಗಳ ಪಂದ್ಯಕ್ಕಾಗಿ ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರು ಈಗ ಭಾರತಕ್ಕೆ ಮರಳಲಿದ್ದಾರೆ. ಹೋಬಾರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸದಿದ್ದರೂ, ಅವರು ಸರಣಿಯ ಉಳಿದ ಎರಡು ಟಿ20 ಪಂದ್ಯಗಳಿಗೆ ಲಭ್ಯರಾಗುವುದಿಲ್ಲ.

ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯ ನವೆಂಬರ್ 6ರಿಂದ ಪ್ರಾರಂಭವಾಗಲಿದ್ದು, ಆ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಪ್ರಮುಖ ಪಾತ್ರವಹಿಸಲಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಪ್ರಮುಖ ಸ್ಪಿನ್ನರ್ ಆಗಿ ತಂಡದ ಭಾಗವಾಗಿರುವುದರಿಂದ, ಅವರನ್ನು ವಿಶ್ರಾಂತಿ ನೀಡಿ ತಯಾರಿ ನಡೆಸಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 14ರಿಂದ ಆರಂಭವಾಗಲಿದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿ 12 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಬೌಲಿಂಗ್ ನೈಪುಣ್ಯ ಮತ್ತು ಸತತ ಪ್ರದರ್ಶನದ ಹಿನ್ನೆಲೆಯಲ್ಲಿ ಟೆಸ್ಟ್ ಸರಣಿಗೆ ಅವರನ್ನು ಪೂರ್ಣವಾಗಿ ಸಜ್ಜಾಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

error: Content is protected !!