Monday, November 10, 2025

ಕುಮಾರಸ್ವಾಮಿ ‘ಮಾಸ್ಟರ್ ಸ್ಟ್ರೋಕ್’: ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿಟಿಡಿಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡು, ನಾಯಕರ ವಿರುದ್ಧವೇ ಮಾತನಾಡುತ್ತಿದ್ದ ಮಾಜಿ ಸಚಿವ ಜಿ.ಟಿ. ದೇವೇಗೌಡರಿಗೆ ಅಂತಿಮವಾಗಿ ಜೆಡಿಎಸ್ ವರಿಷ್ಠರು ದೊಡ್ಡ ಶಾಕ್ ನೀಡಿದ್ದಾರೆ. ಅವರನ್ನು ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲಾಗಿದೆ.

ಮಾಜಿ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರನ್ನು ನೂತನ ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ನೇಮಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷರಾಗಿದ್ದರೂ ಯಾವುದೇ ಸಭೆಗಳಲ್ಲಿ ಜಿಟಿ ದೇವೇಗೌಡರು ಭಾಗವಹಿಸದಿರುವುದು ಹಾಗೂ ಬಹಿರಂಗವಾಗಿ ಪಕ್ಷದಿಂದ ದೂರ ಉಳಿದಿರುವುದು ಈ ಬದಲಾವಣೆಗೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ಸಮಿತಿಗಳಲ್ಲಿ ಮಹತ್ವದ ನೇಮಕಾತಿಗಳು

ಕೋರ್ ಕಮಿಟಿ ಜೊತೆಗೆ ಜೆಡಿಎಸ್ ಪಕ್ಷದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ, ಪ್ರಚಾರ ಸಮಿತಿ ಮತ್ತು ಶಿಸ್ತು ಪಾಲನ ಸಮಿತಿಗಳಿಗೂ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದೆ.

ರಾಜಕೀಯ ವ್ಯವಹಾರಗಳ ಸಮಿತಿ: ಈ ಮಹತ್ವದ ಸಮಿತಿಯ ಅಧ್ಯಕ್ಷರಾಗಿ ಸ್ವತಃ ಹೆಚ್.ಡಿ. ಕುಮಾರಸ್ವಾಮಿ ಅವರನ್ನೇ ನೇಮಿಸಲಾಗಿದೆ.

ಪ್ರಚಾರ ಸಮಿತಿ: ಇದರ ಅಧ್ಯಕ್ಷರ ಜವಾಬ್ದಾರಿಯನ್ನು ವೈ.ಎಸ್.ವಿ. ದತ್ತಾ ಅವರಿಗೆ ವಹಿಸಲಾಗಿದೆ.

ಶಿಸ್ತುಪಾಲನ ಸಮಿತಿ: ಮಾಜಿ ಸಚಿವ ನಾಗರಾಜಯ್ಯ ಅವರು ಈ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಮುಖರಿಗೆ ಸ್ಥಾನ: ಕುಟುಂಬದ ವಾರಸುದಾರರಿಗೂ ಪ್ರಾತಿನಿಧ್ಯ

20 ಸದಸ್ಯರನ್ನು ಒಳಗೊಂಡ ಕೋರ್ ಕಮಿಟಿ ಮತ್ತು 16 ಸದಸ್ಯರನ್ನು ಒಳಗೊಂಡ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗಳಲ್ಲಿ ಹಾಲಿ, ಮಾಜಿ ಶಾಸಕರು, ಸಚಿವರು ಮತ್ತು ಪಕ್ಷದ ಹಿರಿಯ ನಾಯಕರಿಗೆ ಸ್ಥಾನ ನೀಡಲಾಗಿದೆ.

ಹೆಚ್.ಡಿ. ರೇವಣ್ಣ ಅವರಿಗೆ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ. ಪ್ರಚಾರ ಸಮಿತಿಯಲ್ಲಿ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಅವರಿಗೆ ಅವಕಾಶ ಸಿಕ್ಕಿದೆ. ಕೋರ್ ಕಮಿಟಿಯಿಂದ ಹೊರಗುಳಿದರೂ, ಜಿ.ಟಿ. ದೇವೇಗೌಡರ ಪುತ್ರ ಹರೀಶ್ ಗೌಡ ಅವರಿಗೆ ಪ್ರಚಾರ ಸಮಿತಿಯಲ್ಲಿ ಸ್ಥಾನ ನೀಡುವ ಮೂಲಕ ಜೆಡಿಎಸ್ ವರಿಷ್ಠರು ಅಲ್ಪ ಸಮಾಧಾನ ನೀಡಿದ್ದಾರೆ.

ಈ ಬದಲಾವಣೆಗಳು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಜೆಡಿಎಸ್ ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ವೇದಿಕೆ ಸಿದ್ಧಪಡಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

error: Content is protected !!