Monday, November 3, 2025

ಕರ್ನೂಲ್ ಬಸ್ ದುರಂತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ಪರಿಹಾರ ಧನ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಕರ್ನೂಲು ಬಳಿ ಗುರುವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಪರಿಹಾರ ಧನ ಘೋಷಿಸಿವೆ. ಈ ದುರಂತದಲ್ಲಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಕೇಂದ್ರದಿಂದ ಪರಿಹಾರ: ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಬೆಂಕಿಗಾಹುತಿಯಾದ ಘಟನೆಯ ಕುರಿತು ಪ್ರಧಾನಮಂತ್ರಿ ಕಚೇರಿ (PMO) ತನ್ನ ಎಕ್ಸ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಪಿಎಂ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಸ್ಥರಿಗೆ ತಲಾ ರೂ. 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರೂ. 50 ಸಾವಿರ ಪರಿಹಾರ ಧನ ನೀಡುವುದಾಗಿ ಘೋಷಿಸಲಾಗಿದೆ.

ರಾಜ್ಯದಿಂದ ಹೆಚ್ಚುವರಿ ನೆರವು:

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ, ಬಸ್ ಹಳೆಯದಾಗಿದ್ದ ಕಾರಣ ಅದರಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಇರಲಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ, ರಾಜ್ಯ ಸರ್ಕಾರದಿಂದ ಮೃತರ ಕುಟುಂಬಸ್ಥರಿಗೆ ತಲಾ ರೂ. 5 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರೂ. 2 ಲಕ್ಷ ಹೆಚ್ಚುವರಿ ಪರಿಹಾರ ಘೋಷಿಸಿದ್ದಾರೆ.

ಇದರೊಂದಿಗೆ, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟು ರೂ. 7 ಲಕ್ಷ ಹಾಗೂ ಗಾಯಾಳುಗಳಿಗೆ ಒಟ್ಟು ರೂ. 2.5 ಲಕ್ಷ ಪರಿಹಾರ ದೊರೆಯಲಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!