Tuesday, October 28, 2025

ಜಮೀನಿನಲ್ಲಿ ಲಕ್ಷ್ಮಿ ಪ್ರತಿಷ್ಠಾಪನೆ, ಮಳೆ ಬೆಳೆಗೆ ಪ್ರಾರ್ಥನೆ: ಕೊಪ್ಪಳ ಜಿಲ್ಲೆಯಲ್ಲಿ ಹಾಲುಮತ ಸಮಾಜದ ವಿಶೇಷ ದೀಪಾವಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಪ್ಪಳ ಜಿಲ್ಲೆಯ ಹಾಲುಮತ ಸಮಾಜದ ಕುರಿಗಾರರು ವಿಭಿನ್ನ ರೀತಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದರು.
ತಳಿರು ತೋರಣ ಕಟ್ಟಿ, ಹೂವು ಬಾಳೆದಿಂಡಿನಿಂದ ಸಿಂಗರಿಸಿ ಅಡವಿ ಹಟ್ಟಿಯಲ್ಲಿ ಲಕ್ಷ್ಮಿ ಪಾಂಡವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರು.

ಹಟ್ಟಿಯ ಯುವಕರು ಕುರಿಯ ಹಿಂಡಿನಲ್ಲಿನ ಬಲಿಷ್ಠವಾದ ಟಗರು, ಕುರಿಗಳನ್ನು ಹಿಡಿದು ಲಕ್ಷ್ಮಿಯ ಮುಂದೆ ನಿಲ್ಲಿಸುತ್ತಾರೆ. ಹಟ್ಟಿಯ ಒಡೆಯ ಕುರಿ ಹಾಲು ಕರೆದು ಲಕ್ಷ್ಮಿ ಮುಂದೆ ಹಾಲು ಉಕ್ಕಿಸುವ ಸನ್ನಿವೇಶವು ಯತ್ನಟ್ಟಿ ಗ್ರಾಮದ ಜಮೀನಿನಲ್ಲಿ ನಡೆಯಿತು.

ಈ ವಿಶಿಷ್ಟ ಹಬ್ಬದ ಬಗ್ಗೆ ಮಾಹಿತಿ ನೀಡಿದ ಹಟ್ಟಿಯ ಒಡೆಯ ಮಾರತೆಪ್ಪ, ಇದು ನಮಗೆ ಬಹಳ ದೊಡ್ಡ ಹಬ್ಬ, ಎಲ್ಲರೂ ಒಟ್ಟಿಗೆ ಸೇರಿ ಲಕ್ಷ್ಮಿ ಪೂಜೆ ಮಾಡುತ್ತೇವೆ ಎಂದು ಅನಿಸಿಕೆ ಹಂಚಿಕೊಂಡರು. ಹಟ್ಟಿಯ ಹಿರಿಯ ಸಿದ್ದಪ್ಪ, ಮಳೆ, ಬೆಳೆ ಚೆನ್ನಾಗಿ ಬರಲಿ ಎಂದು ಪ್ರತಿ ವರ್ಷ ಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಹಾಲು ಉಕ್ಕಿದ ಕಡೆ ಜನರು ಸುಖವಾಗಿ ನೆಮ್ಮದಿಯ ಜೀವನ ನಡೆಸುತ್ತಾರೆಂದು ನಾವು ನಂಬಿದ್ದೇವೆ ಎಂದರು.

ಹಟ್ಟಿಯ ಒಡತಿ ಲಕ್ಕವ್ವ, ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ತಳಿರು ತೋರಣ ಕಟ್ಟಿ, ಹೂವಿನಿಂದ ಅಲಂಕರಿಸಿ ಲಕ್ಷ್ಮಿ ಪೂಜೆಯನ್ನು ಮಾಡುತ್ತೇವೆ ಎಂದು ಹೇಳಿದರು. ಹಟ್ಟಿಯ ಸೊಸೆ ಯಲ್ಲಮ್ಮ, ಎಲ್ಲರೂ ಸೇರಿ ಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತೇವೆ ಎಂದರು.

error: Content is protected !!