ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಲೇಟ್ ನೈಟ್ ಪಾರ್ಟಿಗಳ ನಿಯಮ ಉಲ್ಲಂಘನೆ ಕುರಿತಾಗಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಖ್ಯಾತ ಪಬ್‌ಗಳ ವಿರುದ್ಧ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪಬ್‌ಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು.
ಪೊಲೀಸ್ ಮೂಲಗಳ ಪ್ರಕಾರ, ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಭೇಟಿ ನೀಡಿದ್ದ ಎಂದು ಹೇಳಲಾಗಿರುವ ಸೋರ್ ಬೆರ್ರಿ ಪಬ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಗಳಲ್ಲಿ ನಿಗದಿತ ಸಮಯ ಮೀರಿಯೂ ಪಾರ್ಟಿಗಳು ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಬಂದ ದೂರುಗಳ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು.
ಪರಿಶೀಲನೆಯ ವೇಳೆ, ಸೋರ್ ಬೆರ್ರಿ ಪಬ್ ನವೆಂಬರ್ 30ರ ರಾತ್ರಿ 1.25ರವರೆಗೆ ತೆರೆದಿದ್ದು, ಬ್ಯಾಸ್ಟಿಯನ್ ಪಬ್ ಡಿಸೆಂಬರ್ 11ರ ರಾತ್ರಿ 1.30ರವರೆಗೆ ಕಾರ್ಯನಿರ್ವಹಿಸಿದ್ದು ದೃಢಪಟ್ಟಿವೆ. ನಗರ ಪೊಲೀಸ್ ನಿಯಮಾವಳಿಯ ಪ್ರಕಾರ, ಇಂತಹ ಲೇಟ್ ನೈಟ್ ಚಟುವಟಿಕೆಗಳಿಗೆ ನಿರ್ಬಂಧವಿದ್ದು, ಅದನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

