ಹೊಸದಿಗಂತ ಡಿಜಿಟಲ್ ಡೆಸ್ಕ್:
SG ಗುಂಪು ಪ್ರಚಾರ ಮಾಡುತ್ತಿರುವ ಲೆಜೆಂಡ್ಸ್ ಪ್ರೊ ಟಿ20 ಲೀಗ್ ಸಾಮಾನ್ಯ ಲೆಜೆಂಡ್ಸ್ ಟೂರ್ನಮೆಂಟ್ ಮಾತ್ರವಲ್ಲ. ಇದು ವಿಶ್ವ ದಿಗ್ಗಜ ಕ್ರಿಕೆಟಿಗರನ್ನು ಗೌರವಿಸುವಂತೆ ರೂಪುಗೊಂಡಿರುವ ಅದ್ಭುತ ಜಾಗತಿಕ ಕ್ರಿಕೆಟ್ ಆಗಿದೆ. ಶಿಖರ್ ಧವನ್, ಹರ್ಭಜನ್ ಸಿಂಗ್, ಶೇನ್ ವಾಟ್ಸನ್ ಮತ್ತು ಡೇಲ್ ಸ್ಟೇನ್ ಮೊದಲಾದ ಕ್ರಿಕೆಟಿಗರೊಂದಿಗೆ, ಈ ಲೀಗ್ ಅಭಿಮಾನಿಗಳಿಗೆ ಹೊಸ ವರ್ಷದ ರೋಮಾಂಚಕ ಮತ್ತು ಉತ್ಸಾಹಭರಿತ ಆರಂಭವನ್ನು ನೀಡಲಿದೆ.
ಲೆಜೆಂಡ್ಸ್ ಪ್ರೊ ಟಿ20 ಲೀಗ್ ಕ್ರಿಕೆಟ್ ಶ್ರೇಷ್ಠತೆಯ ಆಚರಣೆಯಾಗಿದ್ದು ಅತ್ಯುತ್ತಮ ಆಟಗಾರರನ್ನು ಒಟ್ಟುಗೂಡಿಸಲಿದೆ. ಮೊದಲ ಆವೃತ್ತಿ 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ಗೋವಾದಲ್ಲಿ ನಡೆಯಲಿದ್ದು, ಆರು ಫ್ರಾಂಚೈಸಿ ತಂಡಗಳು ಮತ್ತು 90 ದಿಗ್ಗಜ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ವೆರ್ನಾದಲ್ಲಿ ಹೊಸದಾಗಿ ಉದ್ಘಾಟಿಸಲಾದ 1919 ಸ್ಪೋರ್ಟ್ಜ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಲೀಗ್ ನಡೆಯಲಿದೆ.
ಆಸ್ಟ್ರೇಲಿಯಾ ನಾಯಕ ಮೈಕೆಲ್ ಕ್ಲಾರ್ಕ್ ಅವರನ್ನು ಲೀಗ್ ಕಮಿಷನರ್ ಆಗಿ ನೇಮಕ ಮಾಡಲಾಗಿದ್ದು ಈ ಬಗ್ಗೆ ಮಾತನಾಡಿದ ಅವರು ‘ಕ್ರಿಕೆಟ್ ಭಾರತೀಯರ ಹೃದಯಕ್ಕೆ ಹತ್ತಿರವಾಗಿದ್ದು, ಹಳೆಯ ಸ್ನೇಹಿತರೊಂದಿಗೆ ಮತ್ತು ಹಳೆಯ ಪ್ರತಿಸ್ಪರ್ಧಿಗಳೊಂದಿಗೆ ಮತ್ತೆ ಒಂದಾಗುವ ಅವಕಾಶ ನನಗೆ ಸಂಭ್ರಮ ತಂದಿದೆ ಎಂದರು.
SG ಗ್ರೂಪ್ ನ ರೋಹನ್ ಗುಪ್ತಾ ಮಾತನಾಡಿ ‘ ಲೆಜೆಂಡ್ಸ್ ಪ್ರೊ ಟಿ20 ಲೀಗ್ ಮೂಲಕ ಕ್ರಿಕೆಟ್ ಪರಂಪರೆಯನ್ನು ಗೌರವಿಸುವುದರ ಜೊತೆಗೆ ಅಭಿಮಾನಿಗಳಿಗೆ ಸ್ಪರ್ಧಾತ್ಮಕ ಮತ್ತು ಆಕರ್ಷಕ ಅನುಭವ ಒದಗಿಸುವುದಾಗಿದೆ. ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನು ಗೋವಾಕ್ಕೆ ತರಲು ಸಾಧ್ಯವಾಗಿರುವುದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.
ಲೆಜೆಂಡ್ಸ್ ಪ್ರೊ ಟಿ20 ಲೀಗ್ ಲೆಜೆಂಡ್ಸ್ ಕ್ರಿಕೆಟ್‌ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಶೀಘ್ರದಲ್ಲೇ ತಂಡಗಳ ಹೆಸರು ಮತ್ತು ಟಿಕೆಟ್ ವಿವರಗಳನ್ನು ಘೋಷಿಸಲಾಗುತ್ತದೆ.

