ಹೊಸದಿಗಂತ ಕಲಘಟಗಿ:
ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಚಿರತೆಯೊಂದು ಭೀಕರ ದಾಳಿ ನಡೆಸಿದ್ದು, ರೈತರೊಬ್ಬರ ಎರಡು ಕರುಗಳನ್ನು ಬಲಿಪಡೆದ ಘಟನೆ ಸಂಭವಿಸಿದೆ.
ಹಟಕಿನಾಳ ಗ್ರಾಮದ ನಿವಾಸಿ ಶಂಕರ ಮಹದೇವಪ್ಪ ಅಮಗಾವಕರ್ ಅವರಿಗೆ ಸೇರಿದ ಹೊಲದ ದಡ್ಡಿಯೊಳಗೆ (ಕೊಟ್ಟಿಗೆ) ಕಟ್ಟಿದ್ದ ಕರುಗಳ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದೆ. ರಾತ್ರಿಯ ವೇಳೆ ಹೊಂಚು ಹಾಕಿ ಬಂದ ಚಿರತೆಯು ಕೊಟ್ಟಿಗೆಯೊಳಗೆ ನುಗ್ಗಿ ಎರಡು ಕರುಗಳನ್ನು ಸಾಯಿಸಿದೆ. ಬೆಳಿಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಳಿಯ ಕುರಿತು ಮಾಹಿತಿ ಕಲೆಹಾಕಿರುವ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸತತವಾಗಿ ಕಾಡುಪ್ರಾಣಿಗಳ ಉಪಟಳ ಹೆಚ್ಚುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. “ಕೂಡಲೇ ಚಿರತೆಯನ್ನು ಸೆರೆ ಹಿಡಿದು ಜನವಸತಿ ಪ್ರದೇಶದಿಂದ ದೂರ ಸಾಗಿಸಬೇಕು” ಎಂದು ಹಟಕಿನಾಳದ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಚಿರತೆ ಹಾವಳಿಯಿಂದಾಗಿ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಾಗಿದೆ



