ಹೊಸದಿಗಂತ ಡಿಜಿಟಲ್ ಡೆಸ್ಕ್:
ಬನ್ನೇರುಘಟ್ಟ ಜೈವಿಕ ಉದ್ಯಾನವನಲ್ಲಿ ಗಂಡು ಚಿರತೆಯೊಂದು ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023ರ ಜನವರಿ 3 ರಂದು ಚಾಮರಾಜನಗರದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ಈ ಚಿರತೆಯನ್ನು ರಕ್ಷಿಸಿ, ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆಗ ಅದು ಕೇವಲ ಮೂರು ತಿಂಗಳ ಮರಿಯಾಗಿತ್ತು. ಈ ಚಿರತೆಯು ಅಕ್ಟೋಬರ್ 30ರಿಂದ ಆಹಾರ ಸೇವನೆ ಕಡಿಮೆ ಮಾಡಿದ್ದು, ಹೆಚ್ಚಿನ ಜ್ವರ ಮತ್ತು ದೌರ್ಬಲ್ಯದಿಂದ ಬಳಲುತ್ತಿತ್ತು.
ತಕ್ಷಣಕ್ಕೆ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೂಕ್ತ ಚಿಕಿತ್ಸೆ ಆರಂಭಿಸಿದ್ದರಿಂದ ಆಹಾರ ಸೇವನೆಯು ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಬಳಿಕ ಮಾಂಸದಲ್ಲೇ ಔಷಧವನ್ನು ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಆದಾಗ್ಯೂ, ನವೆಂಬರ್ 13ರಿಂದ ಮತ್ತೆ ಆಹಾರ ಸೇವನೆ ನಿಲ್ಲಿಸಿದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ರಕ್ತದ ಪರೀಕ್ಷೆಗಾಗಿ ಮಾದರಿ ಕಳುಹಿಸಿ, ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಎದೆಗೂಡಿನ ಮತ್ತು ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಛಾಯೆಯ ದ್ರವ ಸಂಗ್ರಹ ಆಗಿರುವುದರಿಂದ ಪ್ರಾಣಿಯು ಶ್ವಾಸಕೋಶ ಮತ್ತು ಹೃದಯ ಬಡಿತವನ್ನು ಕಳೆದುಕೊಂಡು (ಹೈಡ್ರೋಥೋರಾಕ್ಸ್ ಮತ್ತು ಕಾರ್ಡಿಯಾಕ್ ಮಯೋಪತಿ) ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿಯ ಒಳಾಂಗಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ IAH&VB ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಮರಣದ ನಿಖರ ಕಾರಣವನ್ನು ತಿಳಿದುಕೊಳ್ಳಲು ವರದಿಯ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

