ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಹಲವು ತಿರುವುಗಳು ನಡೆದಿವೆ. ಈ ಇಡೀ ಬೆಳವಣಿಗೆಯಲ್ಲಿ ನಟಿ ರಮ್ಯಾ ಅವರು ಮೃತರಾದ ರೇಣುಕಾ ಸ್ವಾಮಿ ಅವರ ಕುಟುಂಬದ ಪರವಾಗಿ ನಿಂತು ಧ್ವನಿ ಎತ್ತಿದ್ದಾರೆ.
ದರ್ಶನ್ ಮತ್ತು ಅವರ ತಂಡದ ಕೃತ್ಯಗಳನ್ನು ಸಾರ್ವಜನಿಕವಾಗಿ ಟೀಕಿಸಿದ್ದ ರಮ್ಯಾ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಿರಂತರವಾಗಿ ಆಗ್ರಹಿಸಿದ್ದರು. ಇದರ ಪರಿಣಾಮವಾಗಿ ದರ್ಶನ್ ಅಭಿಮಾನಿಗಳಿಂದ ರಮ್ಯಾ ಅವರು ತೀವ್ರ ಟ್ರೋಲಿಂಗ್ ಮತ್ತು ಆನ್‌ಲೈನ್ ನಿಂದನೆಗೆ ಒಳಗಾಗಿದ್ದರು.
ಆದರೆ, ಎಲ್ಲಾ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಟೀಕೆಗಳನ್ನು ಬದಿಗಿರಿಸಿ, ಸಿನಿಮಾ ವಿಷಯಕ್ಕೆ ಬಂದಾಗ ರಮ್ಯಾ ತಮ್ಮ ವಿಶಾಲ ಹೃದಯವನ್ನು ಪ್ರದರ್ಶಿಸಿದ್ದಾರೆ. ಬಿಡುಗಡೆಗೆ ಸಜ್ಜಾಗುತ್ತಿರುವ ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಅವರು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಸಿನಿಮಾ ಹಾಗೂ ಕಲಾಕ್ಷೇತ್ರಕ್ಕೆ ವೈಯಕ್ತಿಕ ದ್ವೇಷಗಳನ್ನು ತರಬಾರದು ಎಂಬ ಸಂದೇಶವನ್ನು ರಮ್ಯಾ ಅವರ ಈ ನಡೆ ಸಾರಿದೆ. ಕಾನೂನು ಹೋರಾಟ ತನ್ನ ಪಾಡಿಗೆ ನಡೆಯಲಿ, ಆದರೆ ಚಿತ್ರರಂಗದ ಒಂದು ಪ್ರಾಡಕ್ಟ್‌ಗೆ ಶುಭ ಕೋರುವುದು ತಮ್ಮ ಕರ್ತವ್ಯ ಎಂಬಂತೆ ಅವರು ವರ್ತಿಸಿದ್ದು, ಇದಕ್ಕೆ ಹಲವು ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

