ಹೊಸದಿಗಂತ ಡಿಜಿಟಲ್ ಡೆಸ್ಕ್;
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಂದೇ ಮಾತರಂ ರಚನೆಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸುಧಾ ಮೂರ್ತಿ, ವಂದೇ ಮಾತರಂ ಗೀತೆ ದೇಶವನ್ನು ಒಂದುಗೂಡಿಸುವ ಸೂತ್ರ ಎಂದು ಕರೆದರು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಷ್ಟ್ರ ಗೀತೆ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ನಾನು ಇಲ್ಲಿ ಸಂಸದೆಯಾಗಿ, ಲೋಕೋಪಕಾರಿ ಅಥವಾ ಲೇಖಕಿಯಾಗಿ ನಿಂತಿಲ್ಲ. ಮಂದರ್ ಇಂಡಿಯಾ ಅಥವಾ ಭಾರತ ಮಾತೆಯ ಮಗಳಾಗಿ ನಿಂತಿದ್ದೇನೆ. ಭಾರತದಲ್ಲಿರುವ ಪ್ರತಿ ರಾಜ್ಯವು ಬಣ್ಣ ಬಣ್ಣದ ತುಂಡಿನ ಬಟ್ಟೆಯಂತೆ. ಆ ಎಲ್ಲಾ ತುಂಡುಗಳನ್ನು ಒಟ್ಟಿಗೆ ಬೆಸೆಯುವ ದಾರ ಮತ್ತು ಸೂಜಿಯೇ ಈ ವಂದೇ ಮಾತರಂ ಗೀತೆ. ಇದು ಕೇವಲ ಭೂಪಟ ಅಥವಾ ಧ್ವಜವಲ್ಲ, ಇದು ಭೂಮಿಯನ್ನು ತಾಯ್ನಾಡು ಎಂದು ಪರಿಗಣಿಸುವ ಪರಿಕಲ್ಪನೆ. ಇದು ಕೇವಲ ಭೂಮಿಯ ತುಂಡಲ್ಲ, ಇದು ಮಾತೃಭೂಮಿʼ ಎಂದು ಸುಧಾ ಮೂರ್ತಿ ಅವರು ವರ್ಣಿಸಿದರು.
ಎಲ್ಲ ರಾಜ್ಯದ ಶಾಲಾ ಮಕ್ಕಳಿಗೆ ರಾಷ್ಟ್ರಗೀತೆ ಜನಗಣ ಮನವನ್ನು ಕಲಿಸುತ್ತೇವೆ. ಆದರೆ, ವಂದೇ ಮಾತರಂ ಹಾಡಿಸದಿರಲು ಕಾರಣ ಏನು? ಎಂದು ಪ್ರಶ್ನಿಸಿದ ಅವರು, ಮಕ್ಕಳಿಗೆ ವಂದೇ ಮಾತರಂ ಗೀತೆ ಕಲಿಸೋಕೆ ಒಂದು ಮೂರು ನಿಮಿಷ ಹಿಡಿಯಬಹುದು ಅಷ್ಟೇ. ಆದರೆ, ಹಾಡನ್ನು ಕಲಿಸಲು ನಾವು ಮುಂದಾಗುತ್ತಲೇ ಇಲ್ಲ ಯಾಕೆ?. ಹೀಗೆ ಈ ನಡವಳಿಕೆ ಮುಂದುವರೆದರೆ, ಮುಂದೊಂದು ದಿನ ನಮ್ಮ ಮಕ್ಕಳು ವಂದೇ ಮಾತರಂ ಹಾಡನ್ನು ಹಾಡೋದೆ ಮರೆತು ಬಿಡುತ್ತಾರೆ. ಸಾಹಿತ್ಯ ಮರೆಯುತ್ತಾರೆ.ಸಂಪೂರ್ಣ ಪಠ್ಯವನ್ನೇ ಕಳೆದುಕೊಳ್ಳುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

