ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿರುವ 15 ವರ್ಷ ಮೀರಿದ ವಾಹನಗಳಿಗೆ ಒಂದು ವರ್ಷ ವಿಸ್ತರಣೆಯ ಜೊತೆಗೆ, ಸುಸ್ಥಿತಿಯಲ್ಲಿರುವ ಕೆಲ ವಾಹನಗಳಿಗೆ ಗುಜರಿ ನೀತಿಯಡಿ ವಿನಾಯಿತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಪ್ರತಿಪಕ್ಷದ ಸದಸ್ಯ ಗೋವಿಂದರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಯಲ್ಲಿ ಸುಮಾರು 4 ಸಾವಿರ ವಾಹನಗಳಿರುವ ಬಗ್ಗೆ ಗಮನಕ್ಕೆ ಬಂದಿದೆ. ನೆರೆ ರಾಜ್ಯ ತಮಿಳುನಾಡಿನಲ್ಲಿ 15 ವರ್ಷಕ್ಕೂ ಮೀರಿ ಹಾಗೂ ಸುಸ್ಥಿತಿಯಲ್ಲಿರುವ ವಾಹನಗಳಿಗೆ ಒಂದು ವರ್ಷ ಕೇಂದ್ರವು ವಿನಾಯಿತಿ ನೀಡಿರುವ ಮಾಹಿತಿಯಿದೆ. ಹೀಗಾಗಿ, ಸರ್ಕಾರಿ ಇಲಾಖೆಗಳ ವಾಹನಗಳಿಗೂ ಒಂದು ವರ್ಷ ವಿಸ್ತರಣೆ ಜೊತೆಗೆ ಸುಸ್ಥಿತಿಯಲ್ಲಿರುವ ವಾಹನಗಳಿಗೆ ನಿಯಮದಿಂದ ವಿನಾಯಿತಿ ನೀಡಬೇಕೆಂದು ಪತ್ರ ಬರೆಯಲಾಗಿದೆ ಎಂದರು.
ರಾಜ್ಯ ಸಾರಿಗೆ ಸಂಸ್ಥೆಯಲ್ಲಿ 15 ವರ್ಷಕ್ಕೂ ಮೀರಿ ಯಾವ ವಾಹನಗಳಿಲ್ಲ. ಸದ್ಯ 5,800 ಬಸ್ಗಳು ಒಡಾಡುತ್ತಿದೆ. ಈ ವರ್ಷ 2 ಸಾವಿರ ಬಸ್ಗಳು ಕಾರ್ಯಾಚರಣೆಗೆ ಸೇರ್ಪಡೆಯಾಗಲಿವೆ. ಪರಿಸರಸ್ನೇಹಿ ಹಾಗೂ ಮಾಲಿನ್ಯ ಮುಕ್ತ ಮಾಡಲು ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ 1,700 ಎಲೆಕ್ಟ್ರಿಕಲ್ ಬಸ್ಗಳು ಕಾರ್ಯಾಚರಿಸುತ್ತಿವೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದರಾಜು, ರಾಜ್ಯದಲ್ಲಿ 15 ವರ್ಷಕ್ಕೂ ಮೀರಿ 1.04 ಕೋಟಿ ವಾಹನಗಳು ಸಂಚಾರ ನಡೆಸುತ್ತಿವೆ. ಬೆಂಗಳೂರಿನಲ್ಲಿ 37 ಲಕ್ಷ ವಾಹನಗಳಿವೆ. 4 ಸಾವಿರ ವಾಹನಗಳು ಸರ್ಕಾರದ ವಿವಿಧ ಇಲಾಖೆಗಳ ವಾಹನಗಳೇ ಆಗಿವೆ. ಸರಾಸರಿ ಪ್ರತಿ ಮೂರು ವಾಹನಗಳಲ್ಲಿ ಒಂದು ವಾಹನ ಅವಧಿ ಮೀರಿದೆ ಎಂದು ಅಂಕಿ-ಅಂಶ ಸಮೇತ ಹೇಳಿದರು.

