Saturday, October 18, 2025

ಬಲವಂತದ ಮತಾಂತರಕ್ಕೆ ಜೀವಾವಧಿ ಶಿಕ್ಷೆ, 10 ಲಕ್ಷ ರೂ ದಂಡ: ಉತ್ತರಾಖಂಡ ಸರ್ಕಾರದಿಂದ ಕಠಿಣ ಕಾನೂನು ಜಾರಿಗೆ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉತ್ತರಾಖಂಡ ಸರ್ಕಾರ ಬಲವಂತದ ಮತಾಂತರಕ್ಕೆ ಜೀವಾವಧಿ ಶಿಕ್ಷೆ, 10 ಲಕ್ಷ ರೂ ದಂಡ ಹೇರುವ ಮಸೂದೆ ಜಾರಿಗೆ ತರಲು ನಿರ್ಧರಿಸಿದೆ.

ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಲವ್ ಜಿಹಾದ್ ಆರೋಪದ ಬಗ್ಗೆ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲಿದ್ದು, ಧಾಮಿ ಸಚಿವ ಸಂಪುಟವು ಹೊಸ ತಿದ್ದುಪಡಿ ಮಸೂದೆಯನ್ನು ಅನುಮೋದಿಸಿದೆ. ಬಲವಂತದ ಮತಾಂತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ. ಅಲ್ಲದೆ, 10 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.

ಮಳೆಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸಲಿದೆ ಎಂದು ಹೇಳಲಾಗಿದ್ದು, ವಿಧಾನಸಭೆಯ ಮಳೆಗಾಲದ ಅಧಿವೇಶನ ಆಗಸ್ಟ್ 19 ರಿಂದ ಪ್ರಾರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಲಾಗಿದೆ.

ಪ್ರಸ್ತುತ ಉತ್ತರಖಂಡದಲ್ಲಿ ಜಾರಿ ಇರುವ ಕಾನೂನಿನಲ್ಲಿ, ಬಲವಂತದ ಮತಾಂತರದ ಸಂದರ್ಭದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ಹೊಸ ಕಾನೂನಿನಲ್ಲಿ, ಇದನ್ನು 14 ವರ್ಷಗಳಿಗೆ ಹೆಚ್ಚಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ, ಶಿಕ್ಷೆಯನ್ನು 20 ವರ್ಷಗಳವರೆಗೆ ಹೆಚ್ಚಿಸಬಹುದು. ತಿದ್ದುಪಡಿ ಮಾಡಿದ ಮಸೂದೆಯಲ್ಲಿ, ವಾರಂಟ್ ಇಲ್ಲದೆ ಆರೋಪಿಯನ್ನು ಬಂಧಿಸುವ ಹಕ್ಕನ್ನು ಪೊಲೀಸರಿಗೆ ನೀಡಲಾಗಿದೆ. ಅಲ್ಲದೆ, ಮತಾಂತರಕ್ಕೆ ಸಂಬಂಧಿಸಿದ ಅಪರಾಧದಿಂದ ಗಳಿಸಿದ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಹೊಸ ಮಸೂದೆಯಲ್ಲೇನಿದೆ?
ಹೊಸ ಮಸೂದೆಯಲ್ಲಿ, ಆರೋಪಿಯನ್ನು ವಾರೆಂಟ್ ಇಲ್ಲದೆಯೂ ಬಂಧಿಸಬಹುದು. ಈ ಮಸೂದೆಯಲ್ಲಿ, ಎಲ್ಲಾ ಅಪರಾಧಗಳನ್ನು ಜಾಮೀನು ರಹಿತವಾಗಿಸಲಾಗಿದೆ . ಕೆಲವು ಪ್ರಕರಣಗಳಲ್ಲಿ, ಆರೋಪಿಯು ತಪ್ಪಿತಸ್ಥನಲ್ಲ ಮತ್ತು ಮತ್ತೆ ಅಂತಹ ಅಪರಾಧ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದಾಗ ಮಾತ್ರ ಜಾಮೀನು ನೀಡಲಾಗುತ್ತದೆ.

ಅಂತೆಯೇ ಪ್ರಸ್ತಾವಿತ ಮಸೂದೆಯಲ್ಲಿ, ಮತಾಂತರಕ್ಕೆ ಸಂಬಂಧಿಸಿದ ಅಪರಾಧಗಳ ಮೂಲಕ ಯಾವುದೇ ಆಸ್ತಿಯನ್ನು ಸಂಪಾದಿಸಿದ್ದರೆ, ಜಿಲ್ಲಾಧಿಕಾರಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಹೊಸ ಮಸೂದೆಯಲ್ಲಿ ಈ ಕಾನೂನಿನಡಿಯಲ್ಲಿ ಯಾವುದೇ ಅಪರಾಧದ ಮೂಲಕ ಯಾವುದೇ ಆಸ್ತಿಯನ್ನು ಗಳಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ಭಾವಿಸಿದರೆ, ನ್ಯಾಯಾಲಯವು ಅಂತಹ ಅಪರಾಧವನ್ನು ಗಮನಕ್ಕೆ ತೆಗೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಬಹುದು ಎಂಬ ನಿಬಂಧನೆಯೂ ಇದೆ.

error: Content is protected !!