ಎಲ್ಲರೂ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಬಯಸುತ್ತಾರೆ. ಆದರೆ ದೀರ್ಘಾಯುಷ್ಯವು ಕೇವಲ ಒಳ್ಳೆಯ ವಂಶವಾಹಕ ಜೀನ್‌ಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ನಮ್ಮ ಪ್ರತಿದಿನದ ಆಹಾರ, ಜೀವನಶೈಲಿ ಹಾಗೂ ಮನೋಭಾವನೆಗಳೂ ಕೂಡ ಅದರಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ದೀರ್ಘಕಾಲದವರೆಗೆ ಶಕ್ತಿಯುತವಾಗಿ, ಉತ್ಸಾಹದಿಂದ ಬದುಕುವ ಅವಕಾಶ ಹೆಚ್ಚುತ್ತದೆ.
ಜಾಗೃತೆಯಿಂದ ತಿನ್ನುವ ಅಭ್ಯಾಸ
ಹೊಸ ಹೊಸ ಡಯಟ್‌ಗಳನ್ನು ಅನುಸರಿಸುವುದಕ್ಕಿಂತ ನಾವು ತಿನ್ನುವ ಪ್ರತಿಯೊಂದು ಆಹಾರವನ್ನು ಅರಿತು, ನಿಧಾನವಾಗಿ ತಿನ್ನುವುದು ಮುಖ್ಯ. ಹೊಟ್ಟೆ ತುಂಬಿದ ತಕ್ಷಣ ತಿನ್ನುವುದನ್ನು ನಿಲ್ಲಿಸುವುದು, ಅತಿಯಾಗಿ ತಿನ್ನದಂತೆ ನೋಡಿಕೊಳ್ಳುವುದು ಜೀರ್ಣಕ್ರಿಯೆಗೆ ಒಳ್ಳೆಯದು.

ನೈಸರ್ಗಿಕ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಿ
ಪ್ರತಿ ದಿನದ ಜೀವನದಲ್ಲಿ ಚಲನವಲನ ಹೆಚ್ಚಿಸಿಕೊಳ್ಳುವುದು ಅಗತ್ಯ. ಜಿಮ್‌ಗೆ ಹೋಗದೇ ಇದ್ದರೂ ನಡೆಯುವುದು, ಮೆಟ್ಟಿಲುಗಳನ್ನು ಬಳಸುವುದು, ತೋಟಗಾರಿಕೆ ಮಾಡುವುದು ಅಥವಾ ಮನೆಯನ್ನು ಉತ್ಸಾಹದಿಂದ ಸ್ವಚ್ಛಗೊಳಿಸುವುದು ದೇಹವನ್ನು ಸದಾ ಸಕ್ರಿಯವಾಗಿರಿಸುತ್ತದೆ. ಇದರಿಂದ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ಬಾಂಧವ್ಯ ಮತ್ತು ಸ್ನೇಹವನ್ನು ಗಟ್ಟಿಗೊಳಿಸಿ
ಒಂಟಿತನವು ಆರೋಗ್ಯಕ್ಕೆ ಹಾನಿಕಾರಕ. ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ. ಸಕಾರಾತ್ಮಕ ಬಾಂಧವ್ಯಗಳು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತವೆ.

ಸಸ್ಯಾಧಾರಿತ ಆಹಾರಗಳತ್ತ ಗಮನ ಹರಿಸಿ
ಹೆಚ್ಚಾಗಿ ತರಕಾರಿ, ಹಣ್ಣು, ಬೀನ್ಸ್, ಬೀಜಗಳು ಮತ್ತು ನಟ್ಸ್‌ಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಈ ಆಹಾರ ಪದ್ಧತಿ ಹೃದಯ ಹಾಗೂ ಕರುಳಿನ ಆರೋಗ್ಯವನ್ನು ಕಾಪಾಡಿ, ಅನೇಕ ಕಾಯಿಲೆಗಳ ಅಪಾಯವನ್ನು ತಡೆಯಲು ಸಹಕಾರಿಯಾಗಿದೆ.

ವಿಶ್ರಾಂತಿ ಮತ್ತು ಪುನಶ್ಚೈತನ್ಯಕ್ಕೆ ಆದ್ಯತೆ ನೀಡಿ
ಚೆನ್ನಾದ ನಿದ್ರೆ, ಧ್ಯಾನ ಮತ್ತು ಪ್ರಕೃತಿಯೊಡನೆ ಸಮಯ ಕಳೆಯುವುದರಿಂದ ದೇಹ-ಮನಸ್ಸಿಗೆ ಸಮತೋಲನ ಸಿಗುತ್ತದೆ. ದಿನಕ್ಕೆ 20 ನಿಮಿಷ ನಿದ್ದೆ ಮಾಡಿದರೂ ದೇಹ ಪುನಶ್ಚೈತನ್ಯ ಹೊಂದುತ್ತದೆ. ಇಂತಹ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡುತ್ತವೆ.