ನಂಬಿಕೆ ಅನ್ನೋದು ಒಂದು ಸಂಬಂಧದ ಆತ್ಮ. ಅದು ಒಮ್ಮೆ ಬಿರುಕು ಬಿಟ್ಟರೆ, ಮಾತುಗಳ ಅರ್ಥವೂ ಬದಲಾಗುತ್ತದೆ, ಭಾವನೆಗಳ ಭದ್ರತೆಯೂ ಕುಸಿಯುತ್ತದೆ. “ನಂಬಿಕೆ ಒಮ್ಮೆ ಮುರಿದರೆ ಮತ್ತೆ ಸರಿಯಾಗುತ್ತಾ?” ಎಂಬ ಪ್ರಶ್ನೆ ಬಹುತೇಕ ಎಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಇದರ ಉತ್ತರ ಸರಳವಾಗಿಲ್ಲ. ಅದು ಸಂಬಂಧದಲ್ಲಿರುವ ವ್ಯಕ್ತಿಗಳ ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಬದಲಾವಣೆಯ ಇಚ್ಛೆಯ ಮೇಲೆ ನಿಂತಿರುತ್ತದೆ.
ನಂಬಿಕೆ ಮುರಿದ ನೋವು ಮಾತಿಗಿಂತ ಆಳವಾದುದು: ನಂಬಿಕೆ ಮುರಿದಾಗ ನೋವು ಕೇವಲ ಒಂದು ಘಟನೆಗೆ ಸೀಮಿತವಾಗಿರುವುದಿಲ್ಲ. ನಾವು ಕಟ್ಟಿಕೊಂಡಿದ್ದ ನಿರೀಕ್ಷೆಗಳು, ಭಾವನಾತ್ಮಕ ಭದ್ರತೆ ಎಲ್ಲವೂ ಒಂದೇ ಕ್ಷಣದಲ್ಲಿ ಕುಸಿಯುತ್ತದೆ. ಅದೇ ನೋವನ್ನು ಹೆಚ್ಚು ತೀವ್ರವಾಗಿಸುತ್ತದೆ.
ಟೈಮ್ ಮಾತ್ರ ಸಾಕಾಗುವುದಿಲ್ಲ: ಸಮಯ ಹೋದಂತೆ ಎಲ್ಲವೂ ಸರಿಯಾಗುತ್ತದೆ ಎನ್ನುವುದು ತಪ್ಪು ಭ್ರಮೆ. ನಂಬಿಕೆ ಮರಳಿ ಬರಲು ಸಮಯಕ್ಕಿಂತ ಹೆಚ್ಚು ಸತ್ಯ, ಸ್ಪಷ್ಟತೆ ಮತ್ತು ನಿರಂತರ ಸತ್ಕೃತ್ಯಗಳು ಅಗತ್ಯ.
ತಪ್ಪನ್ನು ಒಪ್ಪಿಕೊಳ್ಳುವುದೇ ಮೊದಲ ಹೆಜ್ಜೆ: ತಪ್ಪು ಮಾಡಿದವನು ಕಾರಣ ಹೇಳುವುದಕ್ಕಿಂತ ತನ್ನ ತಪ್ಪನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಜವಾಬ್ದಾರಿ ಸ್ವೀಕರಿಸಿದಾಗಲೇ ನಂಬಿಕೆಯ ಪುನರ್‌ನಿರ್ಮಾಣ ಆರಂಭವಾಗುತ್ತದೆ.
ಇದನ್ನೂ ಓದಿ: ಅದ್ಧೂರಿಯಾಗಿ ನಡೆಯಿತು ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತಗಣ!
ನಂಬಿಕೆ ಮರುನಿರ್ಮಾಣ ಒಂದು ನಿಧಾನ ಪ್ರಕ್ರಿಯೆ: ಮುರಿದ ಗಾಜನ್ನು ಜೋಡಿಸಿದಂತೆ, ನಂಬಿಕೆಯಲ್ಲೂ ಗುರುತು ಉಳಿಯುತ್ತದೆ. ಆದರೆ ನಿರಂತರ ಸತ್ಯತೆ, ಸಣ್ಣ ಸಣ್ಣ ನಂಬಿಕಾರ್ಹ ನಡೆಗಳು ಆ ಗಾಯವನ್ನು ನಿಧಾನವಾಗಿ ಮರೆಮಾಡುತ್ತವೆ.
ಕೆಲವೊಮ್ಮೆ ದೂರ ಹೋಗುವುದೇ ಆತ್ಮಗೌರವ: ಎಲ್ಲಾ ಸಂಬಂಧಗಳಲ್ಲೂ ನಂಬಿಕೆಯನ್ನು ಮರಳಿ ಕಟ್ಟಲು ಸಾಧ್ಯವಿಲ್ಲ. ಕೆಲವೊಮ್ಮೆ ದೂರ ಸರಿಯುವುದು ದುರ್ಬಲತೆಯಲ್ಲ, ಅದು ನಮ್ಮ ಮನಸ್ಸಿನ ಶಾಂತಿ ಮತ್ತು ಆತ್ಮಗೌರವವನ್ನು ಕಾಪಾಡುವ ಬಲವಾದ ನಿರ್ಧಾರವಾಗಿರುತ್ತೆ.

