ಜೀವನದಲ್ಲಿ ಎಲ್ಲರಿಗೂ ಖುಷಿ ಕೊಡಬೇಕು, ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ನಡೆಯಬೇಕು ಅನ್ನೋ ಮನೋಭಾವ ನಮ್ಮಲ್ಲಿ ಬಹಳ ಜನರಲ್ಲಿ ಇರುತ್ತದೆ. ಅದೇ ಕಾರಣಕ್ಕೆ ನಮಗೆ ಇಷ್ಟವಿಲ್ಲದಿದ್ದರೂ, ಸಾಧ್ಯವಿಲ್ಲದಿದ್ದರೂ ಸಹ ‘ಹೌದು’ ಅಂತ ಹೇಳಿಬಿಡುತ್ತೇವೆ. ಆದರೆ ಹೀಗೆ ನಿರಂತರವಾಗಿ ನಮ್ಮನ್ನು ಮರೆತು ಇತರರಿಗಾಗಿ ಬದುಕುತ್ತಾ ಹೋದರೆ, ಒಳಗಿನ ಶಾಂತಿ ನಿಧಾನವಾಗಿ ಕಳೆದುಹೋಗುತ್ತದೆ. ಅಂಥ ಸಂದರ್ಭಗಳಲ್ಲಿ ‘ನೋ’ ಅಂತ ಹೇಳೋದು ಒಂದು ಧೈರ್ಯ, ಒಂದು ಆತ್ಮಗೌರವದ ಪಾಠವಾಗುತ್ತದೆ.
‘ನೋ’ ಅಂದ್ರೆ ಸ್ವಾರ್ಥ ಅಲ್ಲ, ಸ್ವಸಂರಕ್ಷಣೆ:
ಎಲ್ಲವನ್ನೂ ಒಪ್ಪಿಕೊಳ್ಳುವ ವ್ಯಕ್ತಿ ಒಳ್ಳೆಯವನು ಅನ್ನೋ ಭ್ರಮೆ ಸಮಾಜದಲ್ಲಿ ಇದೆ. ಆದರೆ ನಮ್ಮ ಸಮಯ, ಶಕ್ತಿ ಮತ್ತು ಮನಸ್ಸಿಗೂ ಮಿತಿಯಿದೆ. ನಮಗೆ ಹಾನಿಯಾಗುವ ವಿಷಯಗಳಿಗೆ ‘ನೋ’ ಹೇಳುವುದು ಸ್ವಾರ್ಥವಲ್ಲ, ಅದು ನಮ್ಮನ್ನು ನಾವು ಕಾಪಾಡಿಕೊಳ್ಳುವ ಕ್ರಮ.
ಪ್ರತಿಯೊಬ್ಬರಿಗೂ ತೃಪ್ತಿ ಕೊಡಲು ಸಾಧ್ಯವಿಲ್ಲ:
ನಾವು ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲರಿಗೂ ಇಷ್ಟವಾಗೋದು ಅಸಾಧ್ಯ. ಯಾರನ್ನಾದರೂ ಖುಷಿಪಡಿಸಲು ನಮ್ಮ ಮೌಲ್ಯಗಳನ್ನು ತ್ಯಜಿಸಿದರೆ, ಕೊನೆಗೆ ನಾವು ನಮ್ಮ ದೃಷ್ಟಿಯಲ್ಲಿ ಅಸಮಾಧಾನಕ್ಕೆ ಒಳಗಾಗುತ್ತೇವೆ. ಕೆಲವರ ಅಸಮಾಧಾನಕ್ಕಿಂತ ನಮ್ಮ ಆತ್ಮತೃಪ್ತಿ ಮುಖ್ಯ.
‘ನೋ’ ಹೇಳಿದಾಗ ಸಂಬಂಧಗಳು ಸ್ಪಷ್ಟವಾಗುತ್ತವೆ:
ನಮ್ಮ ಮಿತಿಗಳನ್ನು ಗೌರವಿಸುವವರು ಯಾರು, ಉಪಯೋಗಿಸುವವರು ಯಾರು ಅನ್ನೋದು ‘ನೋ’ ಹೇಳಿದಾಗಲೇ ಗೊತ್ತಾಗುತ್ತದೆ. ನಿಜವಾದ ಸಂಬಂಧಗಳು ನಮ್ಮ ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುತ್ತವೆ.
ಮನಸ್ಸಿನ ಶಾಂತಿಗೆ ‘ನೋ’ ಅಗತ್ಯ:
ಇಷ್ಟವಿಲ್ಲದ ಜವಾಬ್ದಾರಿಗಳನ್ನು ಹೊತ್ತುಕೊಂಡು ಬದುಕಿದರೆ, ಮನಸ್ಸು ಸದಾ ಒತ್ತಡದಲ್ಲಿರುತ್ತದೆ. ಸಮಯಕ್ಕೆ ತಕ್ಕಂತೆ ‘ನೋ’ ಹೇಳಲು ಕಲಿತರೆ, ಜೀವನ ಹೆಚ್ಚು ಹಗುರವಾಗುತ್ತದೆ.
‘ನೋ’ ಹೇಳುವುದೂ ಆತ್ಮವಿಶ್ವಾಸದ ಒಂದು ಭಾಗ:
ನಮ್ಮ ನಿರ್ಧಾರಗಳ ಮೇಲೆ ನಂಬಿಕೆ ಇದ್ದಾಗ ಮಾತ್ರ ನಾವು ‘ನೋ’ ಹೇಳಬಲ್ಲೆವು. ಇದು ನಮ್ಮ ಸ್ವಂತ ಜೀವನದ ನಿಯಂತ್ರಣವನ್ನು ನಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಮೊದಲ ಹೆಜ್ಜೆ.

