January17, 2026
Saturday, January 17, 2026
spot_img

ಬಾಂಗ್ಲಾ ಆಟಗಾರರ ಪರ ನಿಂತ CWAB ಅಧ್ಯಕ್ಷನಿಗೆ ಜೀವ ಬೆದರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್‌ (BCB) ವಿರುದ್ಧ ಧ್ವನಿ ಎತ್ತಿರುವ ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘ (CWAB) ಅಧ್ಯಕ್ಷ ಮೊಹಮ್ಮದ್ ಮಿಥುನ್‌ಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಆಟಗಾರರ ಹಕ್ಕುಗಳ ಪರವಾಗಿ ನಿಂತಿರುವುದೇ ಈ ಬೆದರಿಕೆಗಳಿಗೆ ಕಾರಣ ಎಂದು ಮಿಥುನ್ ಬಹಿರಂಗವಾಗಿ ಹೇಳಿದ್ದಾರೆ.

ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರು ಆಟಗಾರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ, ಅವರ ರಾಜೀನಾಮೆಯನ್ನು CWAB ಆಗ್ರಹಿಸಿತ್ತು. ನಜ್ಮುಲ್ ಇಸ್ಲಾಂ ರಾಜೀನಾಮೆ ನೀಡುವವರೆಗೂ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಆಟಗಾರರು ಎಚ್ಚರಿಕೆ ನೀಡಿದ್ದು, ಅದರಂತೆ ಶುಕ್ರವಾರ ನಡೆಯಬೇಕಿದ್ದ ಎರಡು ಪಂದ್ಯಗಳು ರದ್ದಾಗಿದ್ದವು.

ಈ ಬೆಳವಣಿಗೆಗಳ ಮಧ್ಯೆ ಮಾತನಾಡಿದ ಮೊಹಮ್ಮದ್ ಮಿಥುನ್, “ನಾನು ದೇಶದ ವಿರುದ್ಧ ಮಾತನಾಡಿಲ್ಲ. ಕ್ರಿಕೆಟ್ ಮತ್ತು ಆಟಗಾರರ ಸುರಕ್ಷತೆಗಾಗಿ ಮಾತ್ರ ಧ್ವನಿ ಎತ್ತಿದ್ದೇನೆ. ಆದರೂ ನನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ. ಇದು ನನಗೆ ಹೊಸ ಅನುಭವ” ಎಂದು ಹೇಳಿದ್ದಾರೆ. “ನಾನು ಸಂಘದ ಅಧ್ಯಕ್ಷನಾಗಿರುವುದರಿಂದ ಆಟಗಾರರ ಪರವಾಗಿ ಮಾತನಾಡದಿದ್ದರೆ, ಆ ಹುದ್ದೆಗೆ ಅರ್ಥವೇ ಇರದು. ಯಾರೂ ದೇಶಕ್ಕಿಂತ ಮೇಲಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಯಾರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂಬುದನ್ನು ಮಿಥುನ್ ಬಹಿರಂಗಪಡಿಸದಿದ್ದರೂ, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರ ಕೆಲವರು ಈ ಬೆದರಿಕೆಗಳ ಹಿಂದೆ ಬಿಸಿಬಿಯ ಉನ್ನತಾಧಿಕಾರಿಗಳ ಪಾತ್ರವಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Must Read

error: Content is protected !!