ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 2025ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಹೆಣ್ಣುಮಕ್ಕಳು ಇತಿಹಾಸ ರಚಿಸಿದ್ದಾರೆ. ದಕ್ಷಿಣ ಆಫ್ರಿಕಾವನ್ನು 52 ರನ್‌ಗಳ ಅಂತರದಲ್ಲಿ ಸೋಲಿಸಿ, ಭಾರತ ಮಹಿಳಾ ತಂಡವು ತನ್ನ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಜಯದ ಮೂಲಕ 150 ಕೋಟಿ ಭಾರತೀಯರ ಕನಸನ್ನು ನೆರವೇರಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ, ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಮತ್ತೆ ಎತ್ತರಿಸಿದೆ.
ಬದಲಿ ಆಟಗಾರ್ತಿಯಾಗಿ ವಿಶ್ವಕಪ್‌ಗೆ ಸೇರಿದ ಶಫಾಲಿ ವರ್ಮಾ ಈ ಪಂದ್ಯದಲ್ಲಿ ಸಿಡಿಲಿನಂತಾದ 87 ರನ್‌ಗಳ ಇನ್ನಿಂಗ್ಸ್ ಆಡಿದರು ಮತ್ತು ಬೌಲಿಂಗ್‌ನಲ್ಲಿ ಪ್ರಮುಖ 2 ವಿಕೆಟ್ ಪಡೆದರು. ಇತ್ತ ದೀಪ್ತಿ ಶರ್ಮಾ ತಮ್ಮ ಆಲ್‌ರೌಂಡರ್ ಕೌಶಲ್ಯವನ್ನು ಪ್ರದರ್ಶಿಸಿ 58 ರನ್‌ಗಳ ಇನ್ನಿಂಗ್ಸ್ ಜೊತೆಗೆ ಐದು ವಿಕೆಟ್ ಪಡೆದು ತಂಡವನ್ನು ಗೆಲುವಿನ ದಾರಿಗೆ ಕರೆದೊಯ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅದ್ಭುತ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ಕಟ್ಟಿದರು. ಸ್ಮೃತಿ 45 ರನ್‌ಗಳಿಸಿ ಔಟಾದರೂ, ಶಫಾಲಿಯ ಸ್ಫೋಟಕ ಆಟದಿಂದ ತಂಡದ ಮೊತ್ತ ಬಲಿಷ್ಠವಾಯಿತು.
ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ 100 ರ ಸ್ಟ್ರೈಕ್‌ರೇಟ್‌ನಲ್ಲಿ 58 ರನ್‌ಗಳಿಸಿದರು. ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಕೇವಲ 24 ಎಸೆತಗಳಲ್ಲಿ 34 ರನ್‌ಗಳಿಸಿ ತಂಡದ ಮೊತ್ತವನ್ನು 288 ರನ್‌ಗಳವರೆಗೆ ಕೊಂಡೊಯ್ದರು.
ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೋಲ್ವಾರ್ಡ್ 101 ರನ್‌ಗಳ ಹೋರಾಟ ನಡೆಸಿದರೂ, ಉಳಿದ ಬ್ಯಾಟರ್‌ಗಳು ವಿಫಲವಾದ ಕಾರಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್ ಎದುರಿಸಲು ಪ್ರತಿಸ್ಪರ್ಧಿಗಳು ಸಂಪೂರ್ಣವಾಗಿ ವಿಫಲರಾದರು.
ಕೊನೆಗೂ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಭಾರತ ಮಹಿಳಾ ತಂಡವು ಐಸಿಸಿ ಟೂರ್ನಿಯಲ್ಲಿನ ಟ್ರೋಫಿ ಬರವನ್ನು ನೀಗಿಸಿಕೊಂಡಿದೆ. ಈ ಜಯ ಕೇವಲ ಒಂದು ವಿಶ್ವಕಪ್ ಗೆಲುವಲ್ಲ — ಇದು ಭಾರತೀಯ ಮಹಿಳಾ ಕ್ರಿಕೆಟ್‌ನ ಹೊಸ ಅಧ್ಯಾಯದ ಪ್ರಾರಂಭ.

