ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರದ ಭದ್ರತೆ ಮತ್ತು ಸೇನಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷದ ರಕ್ಷಣಾ ಬಜೆಟ್‌ಗೆ ದಾಖಲೆ ಮಟ್ಟದ ಅನುದಾನ ಘೋಷಿಸಿದೆ.
2026–27ನೇ ಹಣಕಾಸು ವರ್ಷಕ್ಕೆ ರಕ್ಷಣಾ ವಲಯಕ್ಕೆ 7.85 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಇದು ಜಿಡಿಪಿಯ ಸುಮಾರು ಶೇ.11ರಷ್ಟು ಪಾಲಾಗಿದೆ. ಈ ಬಜೆಟ್‌ನಲ್ಲಿ ಸೇನೆಯ ಆಧುನೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಆಧುನಿಕ ಶಸ್ತ್ರಾಸ್ತ್ರಗಳು, ತಂತ್ರಜ್ಞಾನ ಮತ್ತು ಉಪಕರಣಗಳ ಖರೀದಿಗಾಗಿ 2.19 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.21.84ರಷ್ಟು ಹೆಚ್ಚಳವಾಗಿದೆ.
ರಕ್ಷಣಾ ಸಚಿವಾಲಯದ ಬಂಡವಾಳ ವೆಚ್ಚವೂ ಹೆಚ್ಚಿದ್ದು, ವಿಮಾನಗಳು ಮತ್ತು ಏರೋ ಎಂಜಿನ್‌ಗಳ ಖರೀದಿಗೆ ಮಾತ್ರವೇ 63,733 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.
ದಿನನಿತ್ಯದ ಸೇನಾ ಕಾರ್ಯಾಚರಣೆಗಳಿಗೆ ಅಗತ್ಯವಾದ ನಿರ್ವಹಣೆ, ಇಂಧನ, ಮದ್ದುಗುಂಡುಗಳು, ದುರಸ್ತಿ ಹಾಗೂ ಸಹಾಯಕ ಸಿಬ್ಬಂದಿ ಸಂಬಳ ಸೇರಿದಂತೆ ಆದಾಯ ವೆಚ್ಚದ ಬಜೆಟ್‌ನ್ನು ಶೇ.17.24ರಷ್ಟು ಹೆಚ್ಚಿಸಲಾಗಿದೆ. ಜೊತೆಗೆ, ನಿವೃತ್ತ ಸೈನಿಕರ ಪಿಂಚಣಿಗೆ ಮೀಸಲಾದ ಮೊತ್ತವನ್ನು ಶೇ.6.53ರಷ್ಟು ಹೆಚ್ಚಿಸಿ 1.71 ಲಕ್ಷ ಕೋಟಿ ರೂಪಾಯಿಗೆ ತಲುಪಿಸಲಾಗಿದೆ.
ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ವಿಮಾನ ಭಾಗಗಳ ತಯಾರಿಕೆಗೆ ಅಗತ್ಯವಾದ ಕೆಲವು ಆಮದು ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಮನ್ನಾ ಮಾಡುವ ನಿರ್ಧಾರವನ್ನೂ ಹಣಕಾಸು ಸಚಿವೆ ಪ್ರಕಟಿಸಿದ್ದಾರೆ.



