April 2, 2026
Thursday, April 2, 2026
spot_img

ಮೃತ್ಯು ಬಾಯಿಂದ ಮರಳಿ ಬಂದ ಪುಟ್ಟ ಬಾಲಕ: CCTVಯಲ್ಲಿ ಸೆರೆಯಾದ ಭೀಕರ ಅಪಘಾತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಹೊರವಲಯದ ನೆಲಮಂಗಲ ನಗರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ವೇಗವಾಗಿ ಬಂದ ಮಾರುತಿ ಎರ್ಟಿಗಾ ಕಾರು ಹರಿದಿದೆ. ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಈ ಘಟನೆ ನಡೆದಿದ್ದು, ಬಾಲಕ ತೀವ್ರ ಗಾಯಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬಾಲಕ ದಕ್ಷಿತ್ ಆಟದಲ್ಲಿ ನಿರತನಾಗಿದ್ದ ವೇಳೆ, ತಿರುವಿನಲ್ಲಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮಗುವಿನ ಮೇಲೆ ಹರಿದಿದೆ. ಕಾರಿನ ಚಕ್ರಗಳು ಬಾಲಕನ ತಲೆ, ಮುಖ ಮತ್ತು ಬೆನ್ನಿನ ಮೇಲೆ ಸಂಚರಿಸಿವೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಈ ಭೀಕರ ದೃಶ್ಯವು ಸ್ಥಳೀಯರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ನೋಡಿದವರು ಬೆಚ್ಚಿಬಿದ್ದಿದ್ದಾರೆ. ಕಾರು ಹರಿಯುತ್ತಿದ್ದಂತೆ ಬಾಲಕನ ಚೀರಾಟ ಕೇಳಿ ಮನೆಯವರು ಓಡಿ ಬಂದಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ದಕ್ಷಿತ್‌ನನ್ನು ತಕ್ಷಣ ನೆಲಮಂಗಲದ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ, ಬೇಜವಾಬ್ದಾರಿಯಿಂದ ಕಾರು ಚಲಾಯಿಸಿದ ಚಾಲಕನ ವಿರುದ್ಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆಯಲ್ಲಿ ಸಂಚರಿಸುವ ಚಾಲಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !