ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನಾಂಬ ದೇವಿಯ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕ-ಯುವತಿಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಓವರ್‌ಸ್ಪೀಡ್‌ನಲ್ಲಿದ್ದ ಇನ್ನೋವಾ ಕಾರು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಮೃತರನ್ನು ಬಸವರಾಜು ಮತ್ತು ಅನುಶ್ರೀ (19) ಎಂದು ಗುರುತಿಸಲಾಗಿದೆ. ಇವರು ಸ್ನೇಹಿತೆ ಛಾಯಾ (20) ಜೊತೆಯಲ್ಲಿ ಬೆಂಗಳೂರಿನಿಂದ ಯಮಹಾ ಬೈಕ್‌ನಲ್ಲಿ ಹಾಸನಕ್ಕೆ ಬಂದಿದ್ದರು. ದೇವಿ ದರ್ಶನ ಮುಗಿಸಿ ಮರಳಿ ಬೆಂಗಳೂರಿನತ್ತ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು.
ಅಪಘಾತದ ವಿವರ:
ಚನ್ನರಾಯಪಟ್ಟಣದ ಕಡೆಯಿಂದ ಅತಿವೇಗವಾಗಿ ಬಂದ ಇನ್ನೋವಾ ಕಾರು ಹೌಸಿಂಗ್ ಬೋರ್ಡ್ ಬಳಿ ಮೊದಲು ಆಕ್ಟಿವಾ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ನಂತರ ನಿಯಂತ್ರಣ ಕಳೆದುಕೊಂಡು ಮುಂದುವರಿದು ಈ ಮೂವರು ಪ್ರಯಾಣಿಸುತ್ತಿದ್ದ ಯಮಹಾ ಬೈಕ್‌ಗೆ ಗುದ್ದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೈಕ್‌ನಲ್ಲಿದ್ದ ಬಸವರಾಜು ಮತ್ತು ಅನುಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದೇ ವೇಳೆ, ಬೈಕ್‌ನಲ್ಲಿದ್ದ ಮತ್ತೋರ್ವ ಯುವತಿ ಛಾಯಾ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಅಪಘಾತದಲ್ಲಿ ಗಾಯಗೊಂಡ ಆಕ್ಟಿವಾ ಸವಾರ ಮೊಹಮ್ಮದ್ ಶಾಹಿದ್ ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.
ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ನಂತರವೂ ಇನ್ನೋವಾ ಕಾರು ನಿಲ್ಲದೆ, ರಸ್ತೆ ಬದಿಯ ಅರಣ್ಯ ಪ್ರದೇಶಕ್ಕೆ ನುಗ್ಗಿ ನಿಂತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಅತಿವೇಗ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.