January17, 2026
Saturday, January 17, 2026
spot_img

ಕೃಷಿ ಅಧಿಕಾರಿ ಮನೆ ಮೇಲೆ ಲೋಕಾ ದಾಳಿ: 2.50 ಕೋಟಿ ಅಕ್ರಮ ಆಸ್ತಿ ಪತ್ತೆ

ಹೊಸ ದಿಗಂತ ವರದಿ, ವಿಜಯಪುರ:

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆ ಜಿಲ್ಲೆಯ ಬಸವನಬಾಗೇವಾಡಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಪ್ಪ ಹನಮಂತಪ್ಪ ಯರಝರಿ ಅವರಿಗೆ ಸಂಬಂಧಿಸಿದ ನಾಲ್ಕು ಕಡೆ ಆಸ್ತಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, 2.50 ಕೋಟಿ ರೂ.ಗೂ ಹೆಚ್ಚು ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ.

ಅಕ್ರಮ ಆಸ್ತಿ ಕುರಿತು ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿ ನೌಕರನಿಗೆ ಸಂಬಂಧಿಸಿದ ಮನೆಯ ಶೋಧನೆ ನಡೆಸಲು ನ್ಯಾಯಾಲಯದಿಂದ ವಾರಂಟ್‌ನ್ನು ಪಡೆದು. ಬೆಳಗ್ಗೆ ಆರೋಪಿ ನೌಕರರಿಗೆ ಸಂಬಂಧಿಸಿದ ವಿಜಯಪುರ ನಗರದ ನವರಸಪುರದ ಮನೆ, ನೌಕರರಿಗೆ ಸಂಬಂಧಿಸಿದ ಬಸವನಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಫಾರ್ಮಹೌಸ್, ಮುದ್ದೇಬಿಹಾಳ ನಗರದಲ್ಲಿರುವ ಆರೋಪಿ ಅಧಿಕಾರಿಯ ಮಾವನ ಮನೆ, ಅಪಾದಿತರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಶೋಧನೆ ಕಾರ್ಯ ನಡೆಸಿದ್ದು, ಶೋಧನೆ ವೇಳೆ ಆರೋಪಿ ವಿಜಯಪುರ ನವರಸಪುರ ಮನೆ, ಲಾಕರ್ ಮತ್ತು ಮಾವನ ಮನೆ ಸೇರಿ ಸುಮಾರು 29,42,000 ರೂ. ನಗದು ಹಣ, ಬೆಳ್ಳಿ ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳು ದೊರೆತಿದ್ದು, ಅಂದಾಜು 2.50 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವದು ಪತ್ತೆಯಾಗಿದೆ.

ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ್ ಮಾರ್ಗದರ್ಶನದಲ್ಲಿ ಡಿಎಸ್‌ಪಿಗಳಾದ ಮಲ್ಲಿಕಾರ್ಜುನ ತುಳಸಿಗೇರಿ, ಬಿ.ಎಸ್. ಪಾಟೀಲ್, ಪೊಲೀಸ್ ಇನ್ಸಪೆಕ್ಟರ್‌ಗಳಾದ ಆನಂದ ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ, ಸಂಗಮನಾಥ ಹೊಸಮನಿ ಹಾಗೂ ವಿಜಯಪುರ ಹಾಗೂ ಬೆಳಗಾವಿ ಪೊಲೀಸ್ ಠಾಣೆಯ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿದೆ.

Must Read

error: Content is protected !!