ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶ ಪುನರ್ ರಚನಾ ತಿದ್ದುಪಡಿ ಮಸೂದೆ- 2026ನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ.
ಲೋಕಸಭೆಯು ಈಗಾಗಲೆ ಮಸೂದೆಯನ್ನು ಅಂಗೀಕರಿಸಿದ್ದು, ಮಸೂದೆಯು ಆಂಧ್ರ ಪ್ರದೇಶ ಪುನರ್ ರಚನ ಕಾಯ್ದೆ – 2014ಕ್ಕೆ ತಿದ್ದುಪಡಿ ತರಲಿದೆ. ಅಮರಾವತಿಯನ್ನು ಆಂಧ್ರ ಪ್ರದೇಶದ ಏಕೈಕ ಮತ್ತು ಶಾಶ್ವತ ರಾಜಧಾನಿಯಾಗಿಸಲು ಮಸೂದೆ ಸಾಂವಿಧಾನಿಕ ಸ್ಥಾನ ಒದಗಿಸಲಿದೆ.
ಚರ್ಚೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ರಾಮ್ ಮನೋಹರ್ ನಾಯ್ಡು, ಈ ಮಸೂದೆಯು ರಾಜ್ಯಕ್ಕೆ ಬಹುದಿನಗಳಿಂದ ಕಾಯುತ್ತಿದ್ದ ಸ್ಪಷ್ಟನೆ ಒದಗಿಸಿದೆ ಮತ್ತು ದೇಶದ ರಾಜಕೀಯ ನಾಯಕತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ವಿಶ್ವಾಸವನ್ನು ತುಂಬಿದೆ. ಆಂಧ್ರ ಪ್ರದೇಶ ರಾಜಧಾನಿ ಕುರಿತು ಈ ಮಸೂದೆ ಜಾರಿಯು ಐತಿಹಾಸಿಕ ಕ್ಷಣವಾಗಲಿದೆ. ಅಲ್ಲದೆ ರಾಜ್ಯ ವಿಭಜನೆಯಾದ ನಂತರ ಆಂಧ್ರ ಪ್ರದೇಶಕ್ಕೆ ಆತ್ಮಗೌರವ ತುಂಬಿದೆ ಎಂದು ಹೇಳಿದರು.
ಇತರ ರಾಜ್ಯಗಳ ರಚನೆಯಂತೆ ಹೊಸ ಆಂಧ್ರ ಪ್ರದೇಶ ರಚನೆಯಾಗದೆ ಗೊಂದಲಗಳೇ ಹೆಚ್ಚಾದವು. ರಾಜಧಾನಿಯೇ ಇಲ್ಲದೆ ಹೊಸ ಆಂಧ್ರ ಪ್ರದೇಶ ರಚನೆಯಾಯಿತು. ಇದೀಗ ಮಸೂದೆಯಿಂದ ಗೊಂದಲಕ್ಕೆ ತೆರೆ ಬಿದ್ದಿದೆ ಎಂದರು. ಕಾಂಗ್ರೆಸ್ ನ ರೇಣುಕಾ ಚೌಧರಿ, ರಾಜ್ಯಕ್ಕೆ ಅಮರಾವತಿಯನ್ನು ರಾಜಧಾನಿಯನ್ನಾಗಿಸಲು 12 ವರ್ಷ ವಿಳಂಬವಾಗಿರುವುದು ಐತಿಹಾಸಿಕ ವೈಫಲ್ಯವಾಗಿದೆ. ಅಮರಾವತಿ ರೈತರು ಮತ್ತು ನಾಗರಿಕರ ಯಾತನೆ, ಹೋರಾಟದ ಫಲವಾಗಿ ಅಮರಾವತಿ ಶಾಶ್ವತ ರಾಜಧಾನಿಯಾಗುತ್ತಿದೆ ಎಂದು ಹೇಳಿದರು. ಚರ್ಚೆಯ ಬಳಿಕ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಬಳಿಕ ಉಪಸಭಾಪತಿ ಹರಿವಂಶ್ ಅವರು ಕಲಾಪವನ್ನು ಈ ತಿಂಗಳ 16ಕ್ಕೆ ಮುಂದೂಡಿದರು.



