Wednesday, January 14, 2026
Wednesday, January 14, 2026
spot_img

ಸಿಂಧನೂರು ಎಇಇ ಮನೆ ಮೇಲೆ ‘ಲೋಕಾ’ ದಾಳಿ: ಅಪಾರ ಪ್ರಮಾಣದ ಆಸ್ತಿ ಪತ್ತೆ

ಹೊಸದಿಗಂತ ವರದಿ ರಾಯಚೂರು:

ರಾಯಚೂರು ಜಿಲ್ಲೆಯ ಸಿಂಧನೂರು ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಇಇ ಡಿ.ವಿಜಯಲಕ್ಷ್ಮಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಅವರ ಮನೆ, ಕಚೇರಿ ಸೇರಿದಂತೆ ಐದು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.

ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಅವರ ನೇತೃತ್ವದಲ್ಲಿ ರಾಯಚೂರಿನ ಐಡಿಎಸ್‌ಎಂಟಿ ಲೇಔಟ್‌ದಲ್ಲಿ ಮೂರಂತಸ್ತಿನ ಮನೆ, ಗಂಗಾಪರಮೇಶ್ವರದಲ್ಲಿನ ಒಂದು ಮನೆ ಸೇರಿ ಎರಡು ಮನೆಗಳು, ಸಿಂಧನೂರಿನ ಕಚೇರಿ, ಯಾದಗಿರಿಯಲ್ಲಿನ ತೋಟದ ಮನೆ, ಜೋಳದಹೆಡಗಿಯಲ್ಲಿ ಅವರ ತಂಗಿಯ ಮನೆ ಮೇಲೂ ಏಕ ಕಾಲಕ್ಕೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಯಾದಗಿರಿಯಲ್ಲಿ 4೦ ಎಕರೆ ಜಮೀನು, ರಾಯಚೂರಿನ ಹೊರವಲಯದಲ್ಲಿ 5 ಎಕರೆ ಜಮೀನು, ಒಂದು ಇನ್ನೋವಾ ಹಾಗೂ ಫೋರ್ಡ್ ಕ್ಲಾಸಿಕ್ ಕಾರು. ಮೂರು ದ್ವೀಚಕ್ರ ವಾಹನಗಳು. ವಿಜಯಲಕ್ಷ್ಮಿ ಅವರ, ಅವರ ಪತಿ, ಮಗ, ಮಗಳು ಸೇರಿದಂತೆ ಒಟ್ಟು ಎಂಟು ಬ್ಯಾಂಕ್ ಖಾತೆಗಳನ್ನು ಗಮನಕ್ಕೆ ಬಂದಿವೆ.

ಮಗಳು ಎಂಡಿ ವ್ಯಾಸಂಗಕ್ಕಾಗಿ ಅಧಿಕೃತವಾಗಿ ಅಂದಾಜು 60 ಲಕ್ಷ ರೂಗಳು ಹಾಗೂ ಮಗ ಎಂಬಿಬಿಎಸ್ ವ್ಯಾಸಂಗಕ್ಕಾಗಿ 20 ಲಕ್ಷಕ್ಕೂ ಅಧಿಕ ಹಣವನ್ನು ವೆಚ್ಚ ಮಾಡಲಾಗಿದೆ. ಯಾದಗಿರಿಬಿ ಎನ್ನುವಲ್ಲಿ ಒಂದು ಲೇಔಟ್, ಬ್ಯಾಂಕಿನಿಂದ ಪಡೆದಿದ್ದ 90 ಲಕ್ಷ ರೂಗಳನ್ನು ಮರು ಪಾವತಿ ಮಾಡಿದ್ದಾರೆ. ಇವರೆಗೆ ಒಟ್ಟು 49 ಆಸ್ತಿಗಳ ದಾಖಲಾತಿಗಳು ಲೋಕಾಯುಕ್ತರ ಗಮನಕ್ಕೆ ಬಂದಿವೆ.

ಮನೆಯಲ್ಲಿನ ಚಿನ್ನಾಭರಣ, ಮನೆ ಹಾಗೂ ಬ್ಯಾಂಕಗಳಲ್ಲಿನ ಲಾಕರ್‌ಗಳನ್ನು ಪರಿಶೀಲನೆ ಮಾಡಬೇಕಿದೆ. ಪ್ರಸಕ್ತ ವಾಸವಾಗಿರುವ ಮನೆ ಐಶಾರಾಮಿ ಜಿಪ್ಲಸ್‌ತ್ರೀ ಮನೆಯಾಗಿದ್ದು ಮನೆಗೆ ಲಿಫ್ಟ್ ಸಹ ಇದೆ. ಈ ಮನೆಯ ಪಕ್ಕದಲ್ಲಿನೇ ಹಳೆಯ ಮನೆ ಇದೆ. ವಿಜಯಲಕ್ಷ್ಮಿ ಅವರು ಅವರ ತಂಗಿ ಸೇರಿದಂತೆ ಇನ್ನು ಅನೇಕರ ಹೆಸರಲ್ಲಿ ಬೇಮಾನಿ ಆಸ್ತಿ ಮಾಡಿರುವ ಕುರಿತು ಲೋಕಾಯುಕ್ತರು ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಇವರ ಒಟ್ಟು ವೇತನದ ಆದಾಯ ಒಂದು ಕೋಟಿಯಾದರೆ ಇವರು ವಾಸಿಸುತ್ತಿರುಯವ ಮನೆಯ ಮೌಲ್ಯವೇ ಒಂದು ಕೋಟಿಗೂ ಅಧಿಕವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ವಿಜಯಲಕ್ಷ್ಮಿ ಅವರು ಬೇರೆ ಕಾರ್ಯದ ನಿಮಿತ್ತ ಹುಬ್ಬಳ್ಳಿ ಧಾರವಾಡಕ್ಕೆ ಹೋದ ಸಮಯದಲ್ಲಿ ಲೋಕಾಯುಕ್ತರ ದಾಳಿಯಾಗಿದ್ದು ಅವರ ಮನೆಯಲ್ಲಿ 80 ವರ್ಷದ ಅವರ ಅವರ ತಾಯಿ ಇದ್ದರು.

ದಾಳಿಯಲ್ಲಿ ಕೊಪ್ಪಳ ಡಿವೈಎಸ್ಪಿ ಲೋಕೇಶ, ಪಿಐ ಕಾಳಪ್ಪ ಬಡಿಗೇರ ದೇರಿದಂತೆ ರಾಯಚೂರು, ಕೊಪ್ಪಳ ಲೋಕಾಯುಕ್ತ ಸಿಬ್ಬಂಧಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.

Most Read

error: Content is protected !!