ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಸಂಭ್ರಮದ ನಡುವೆಯೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಬಗ್ಗೆ ಹರಿದಾಡುತ್ತಿದ್ದ ದೊಡ್ಡದೊಂದು ವದಂತಿಗೆ ಈಗ ತೆರೆ ಬಿದ್ದಿದೆ. ತಮ್ಮ ಮತ್ತು ಆರ್ಸಿಬಿ ಆಡಳಿತ ಮಂಡಳಿಯ ನಡುವಿನ ವಿಮಾನ ಪ್ರಯಾಣದ ಒಪ್ಪಂದದ ಬಗ್ಗೆ ಕೇಳಿಬಂದಿದ್ದ ಸುದ್ದಿಯನ್ನು ಕೊಹ್ಲಿ ತಳ್ಳಿಹಾಕಿದ್ದಾರೆ.
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಅದೇನೆಂದರೆ, ಐಪಿಎಲ್ ಪಂದ್ಯಗಳ ನಡುವೆ ಮೂರು ದಿನಗಳ ಬಿಡುವು ಸಿಕ್ಕರೆ ಲಂಡನ್‌ಗೆ ಹೋಗಿ ಬರಲು ವಿರಾಟ್ ಕೊಹ್ಲಿ ಆರ್ಸಿಬಿ ಮಂಡಳಿಯಿಂದ ವಿಶೇಷ ಚಾಟರ್ಡ್ ವಿಮಾನದ ಬೇಡಿಕೆ ಇಟ್ಟಿದ್ದಾರೆ ಎಂಬುದು. ಈ ಸುದ್ದಿಯು ಕೊಹ್ಲಿ ಅವರ ಬದ್ಧತೆಯ ಬಗ್ಗೆ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು.
ಈ ಸುಳ್ಳು ಸುದ್ದಿ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಅವರು ಸುಮ್ಮನಿರಲಿಲ್ಲ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡ ಕೊಹ್ಲಿ, ಕೇವಲ ಎರಡು ನಗುವ ಎಮೋಜಿಗಳನ್ನು ಹಾಕುವ ಮೂಲಕ ಇದು ಶುದ್ಧ ಸುಳ್ಳು ಮತ್ತು ಹಾಸ್ಯಾಸ್ಪದ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಐಪಿಎಲ್ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ಆರ್ಸಿಬಿ ಶಿಬಿರವನ್ನು ಸೇರಿಕೊಂಡಿರುವ ಅವರು, ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಯುವ ಆಟಗಾರರೊಂದಿಗೆ ಸಮಯ ಕಳೆಯುತ್ತಾ, ಅವರಿಗೆ ಮಾರ್ಗದರ್ಶನ ನೀಡುತ್ತಿರುವ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿವೆ.



