ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಮ್ಮ ಮೆಟ್ರೋದ ಹಳದಿ ಮಾರ್ಗದ ಉದ್ಘಾಟನೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಪ್ರಧಾನಿಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕನ್ನಡದಲ್ಲೇ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ನಾಳೆ, ಆಗಸ್ಟ್ 10 ರಂದು ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಕೆಎಸ್‌ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯವನ್ನು ಹೆಚ್ಚಿಸಲು, ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಾಗುವುದು. ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಗುವುದು ಎಂದು ಮಾಹಿತಿ ಮೋದಿ ಅವರು ನೀಡಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರು ಪ್ರವಾಸದ ವೇಳಾಪಟ್ಟಿ
ಬೆಳಗ್ಗೆ 10.30ಕ್ಕೆ ಹೆಚ್ಎಎಲ್ ಏರ್ ಪೋರ್ಟ್‌ಗೆ ಮೋದಿ ಬಂದಿಳಿಯಲಿದ್ದಾರೆ.
ಬೆಳಗ್ಗೆ 10.55ಕ್ಕೆ ಏರ್ ಪೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ಸರ್ಕಲ್ ಎಚ್‌ಕ್ಯೂಟಿಸಿ ಹೆಲಿಪ್ಯಾಡ್ ಗೆ ಆಗಮನ. ಅಲ್ಲಿಂದ ನೇರವಾಗಿ ಮೋದಿ ಕೆಎಸ್ಆರ್ ರೈಲು ನಿಲ್ದಾಣಕ್ಕೆ ಪ್ರಯಾಣ.
ಬೆಳಗ್ಗೆ 11.15 ರಿಂದ 11.20ರವರೆಗೆ 3 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಬೆಳಗ್ಗೆ 11.45ಕ್ಕೆ ಆರ್.ವಿ. ರೋಡ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಾರೆ. ಬಹು ನಿರೀಕ್ಷಿತ ಹಳದಿ ಮಾರ್ಗದ ಉದ್ಘಾಟನೆಯಾಗಲಿದ್ದು, ಮೆಟ್ರೋ ಹಳದಿ ಮಾರ್ಗ(ರೀಚ್-5) ಕ್ಕೆ ಹಸಿರು ನಿಶಾನೆ ತೋರಿಸಿ, ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣದವರೆಗೆ ಮೆಟ್ರೋದಲ್ಲಿಯೇ ಪ್ರಯಾಣ ಬೆಳೆಸಲಿದ್ದಾರೆ.
ಮಧ್ಯಾಹ್ನ 12.55ಕ್ಕೆ ಎಲೆಕ್ಟ್ರಾನಿಕ್ ಸಿಟಿ ಐಐಐಟಿ ಆಡಿಟೋರಿಯಂಗೆ ಆಗಮನ. ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಐಐಐಟಿ ಆಡಿಟೋರಿಯಂನಲ್ಲಿ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಮತ್ತು ಹಳದಿ ಮೆಟ್ರೋ ಮಾರ್ಗ ಉದ್ಘಾಟನೆ ನಡೆಯಲಿದೆ.
ಮಧ್ಯಾಹ್ನ 2.15ಕ್ಕೆ ಕಾರ್ಯಕ್ರಮ ಸ್ಥಳದಿಂದ ಹೆಲಿಕಾಫ್ಟರ್ ಮೂಲಕ ಹೆಚ್ ಎಎಲ್ ಏರ್ ಪೋರ್ಟ್‌ಗೆ ತೆರಳಿ ಅಲ್ಲಿಂದ 2.40ಕ್ಕೆ ದೆಹಲಿಗೆ ನಿರ್ಗಮನ.