Thursday, January 1, 2026

ಪ್ರೀತಿ, ಸಾವು, ಸೇಡು: ಗಾನವಿ-ಸೂರಜ್ ದುರಂತ ಅಂತ್ಯಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಅತ್ತಿಗೆಯ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೀವ್ರ ಸಂಚಲನ ಮೂಡಿಸಿದ್ದ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪತ್ನಿಯ ಸಾವಿನ ಬೆನ್ನಲ್ಲೇ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಈಗ ಗಾನವಿ ಕುಟುಂಬದ 9 ಜನರ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಕ್ಟೋಬರ್ 29ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸೂರಜ್ ಮತ್ತು ಗಾನವಿ ದಂಪತಿ ಹನಿಮೂನ್‌ಗಾಗಿ ಶ್ರೀಲಂಕಾಕ್ಕೆ ತೆರಳಿದ್ದರು. ಆದರೆ ಅಲ್ಲಿಂದ ವಾಪಸ್ಸಾದ ಕೆಲವೇ ದಿನಗಳಲ್ಲಿ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಗಾನವಿ ಕುಟುಂಬಸ್ಥರು ಸೂರಜ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಸೂರಜ್ ಪೌರುಷದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಅವಮಾನ ತಾಳಲಾರದೆ ಸೂರಜ್ ಕೂಡ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸೂರಜ್ ಸಹೋದರ ಸಂಜಯ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಗಾನವಿ ಕುಟುಂಬಸ್ಥರಾದ ರಾಧಾ, ಬಾಬುಗೌಡ, ಕಾರ್ತಿಕ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿದ್ದಾಗ ಗಾನವಿ ತಾನು ‘ಹರ್ಷ’ ಎಂಬಾತನನ್ನು ಪ್ರೀತಿಸುತ್ತಿರುವುದಾಗಿ ಮತ್ತು ಅವನನ್ನೇ ಮದುವೆಯಾಗುವುದಾಗಿ ಪತಿ ಸೂರಜ್‌ಗೆ ತಿಳಿಸಿದ್ದರು. ಇದರಿಂದ ಸೂರಜ್ ತೀವ್ರ ದಿಗ್ಭ್ರಾಂತರಾಗಿದ್ದರು. ಗಾನವಿ ಸಾವಿನ ನಂತರ ಆಕೆಯ ಸತ್ಯವನ್ನು ಮುಚ್ಚಿಟ್ಟ ಕುಟುಂಬಸ್ಥರು, ಸೂರಜ್ ಮೇಲೆ ಇಲ್ಲಸಲ್ಲದ ಮಾನಹಾನಿಕರ ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಗಾನವಿ ಸಹೋದರರು ಸೂರಜ್‌ಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಸತತ ನಿಂದನೆ ಹಾಗೂ ಆರೋಪಗಳಿಂದ ಮನನೊಂದು ಸೂರಜ್ ಆತ್ಮಹತ್ಯೆ ಮಾಡಿಕೊಂಡರೆ, ಅವರ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಂಡಿದ್ದ ಈ ಜೋಡಿಯ ಬದುಕು ಕೆಲವೇ ದಿನಗಳಲ್ಲಿ ದುರಂತ ಅಂತ್ಯ ಕಂಡಿದೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಗಾನವಿ ಕುಟುಂಬದ ವಿರುದ್ಧ ತನಿಖೆ ಆರಂಭಿಸಿದ್ದಾರೆ.

error: Content is protected !!