February 21, 2026
Saturday, February 21, 2026
spot_img

ಪ್ರೀತಿ ಗೆದ್ದಿತು, ಮನುಷ್ಯತ್ವ ಸೋತಿತು: ಮಗಳ ಪ್ರೇಮ ವಿವಾಹಕ್ಕೆ ಅಳಿಯನ ಮನೆಯನ್ನೇ ಸುಟ್ಟು ಹಾಕಿದ ಮಾವ!

ಹೊಸದಿಗಂತ ಮಂಡ್ಯ:

ಪ್ರೀತಿ ಕುರುಡು ಎನ್ನುತ್ತಾರೆ, ಆದರೆ ಇಲ್ಲಿ ಆಕ್ರೋಶ ಕಣ್ಣು ಮರೆಸಿದೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನನ್ನೇ ವರಿಸಿದಳು ಎಂಬ ಕಾರಣಕ್ಕೆ, ಸ್ವಂತ ತಂದೆಯೇ ಅಳಿಯನ ಮನೆಗೆ ಬೆಂಕಿ ಹಚ್ಚಿ ದಾರುಣ ಕೃತ್ಯವೆಸಗಿರುವ ಘಟನೆ ಮದ್ದೂರು ತಾಲೂಕಿನ ಚುಂಚಗಹಳ್ಳಿಯಲ್ಲಿ ಶನಿವಾರ ಜರುಗಿದೆ.

ಗ್ರಾಮದ ವಿನೋದ್ ಹಾಗೂ ಕಾವ್ಯ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೇಮಕ್ಕೆ ಕುಟುಂಬದವರ ಒಪ್ಪಿಗೆ ಇರಲಿಲ್ಲ. ಕೊನೆಗೆ ಮನೆಯವರ ವಿರೋಧವನ್ನು ಬದಿಗೊತ್ತಿದ ಈ ಜೋಡಿ ನವೆಂಬರ್ 19 ರಂದು ಗುಟ್ಟಾಗಿ ವಿವಾಹವಾಗಿತ್ತು. ಮದುವೆಯ ನಂತರ ದಂಪತಿಗಳು ಗ್ರಾಮಕ್ಕೆ ಬಾರದೆ ಹೊರಗಡೆಯೇ ಉಳಿದುಕೊಂಡಿದ್ದರು.

ಮಗಳ ವಿವಾಹದ ಸುದ್ದಿ ತಿಳಿದ ಕಾವ್ಯಳ ತಂದೆ ಚನ್ನೇಗೌಡ ತೀವ್ರ ಆಕ್ರೋಶಗೊಂಡಿದ್ದರು. ಶನಿವಾರ ಬೆಳಿಗ್ಗೆ ಅಳಿಯನ ಮನೆಗೆ ನುಗ್ಗಿದ ಅವರು ಏಕಾಏಕಿ ಬೆಂಕಿ ಹಚ್ಚಿದ್ದಾರೆ. ಘಟನೆಯ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಬೆಂಕಿಯ ಕೆನ್ನಾಲಗೆಗೆ ಮನೆಯಲ್ಲಿದ್ದ ಟೀವಿ, ಪೀಠೋಪಕರಣ, ಅಡುಗೆ ಸಾಮಗ್ರಿ ಹಾಗೂ ದವಸ ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅಷ್ಟೇ ಅಲ್ಲದೆ, ಮನೆಯಲ್ಲಿದ್ದ 10 ಲಕ್ಷ ರೂ. ನಗದು ಹಾಗೂ 250 ಗ್ರಾಂ ಚಿನ್ನ ಕೂಡ ಬೆಂಕಿಗೆ ಆಹುತಿಯಾಗಿದೆ ಎಂದು ವಿನೋದ್ ಕುಟುಂಬಸ್ಥರು ಕಣ್ಣೀರಿಡುತ್ತಾ ಪೊಲೀಸರಿಗೆ ತಿಳಿಸಿದ್ದಾರೆ.

ಮನೆಗೆ ಬೆಂಕಿ ಹಚ್ಚುವ ಭರದಲ್ಲಿ ಆರೋಪಿ ಚನ್ನೇಗೌಡನಿಗೂ ಗಾಯಗಳಾಗಿದ್ದು, ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದರೂ ಅಷ್ಟರಲ್ಲಾಗಲೇ ಮನೆ ಸಂಪೂರ್ಣ ಹಾನಿಗೊಳಗಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಡಿವೈಎಸ್‌ಪಿ ಯಶವಂತಕುಮಾರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರೇಮಿಗಳಿಬ್ಬರನ್ನು ಮದ್ದೂರು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಘಟನೆ ನಡೆದ ನಂತರ ಯುವತಿಯ ಮನೆಯವರು ಗ್ರಾಮ ತೊರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !