Tuesday, December 23, 2025

ಪ್ರೀತಿಸಿದ ಹುಡುಗಿ ಸಿಗಲಿ ಭಗವಂತ ಎಂದ ಪ್ರೇಮಿ: ದೇಗುಲದ ಹುಂಡೀಲಿ ಸಿಕ್ಕಿತು ಲವ್​​ ಲೆಟರ್​, ಫೋಟೋ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ನಂದಿ ಹಿಲ್ಸ್​​ ಪ್ರೇಮಿಗಳ ಫೆವರೇಟ್​​ ಜಾಗ. ವೀಕೆಂಡ್​​ ಬಂತಂದ್ರೆ ಸಾಕು ಎಲ್ಲಿ ನೋಡಿದ್ರೂ ಬರಿ ಕಪಲ್ಸ್​​ ಕಾಣುತ್ತಾರೆ.

ಈ ಜಾಗದ ಸಮೀಪವೇ ಪುರಾಣ ಪ್ರಸಿದ್ದ ಶಿವನ ದೇವಸ್ಥಾನ ಇದೆ. ಹೀಗಾಗಿ ನಂದಿ ಹಿಲ್ಸ್​​ಗೆ ಹೋಗುವ ಬಹುತೇಕರು ಇಲ್ಲಿಗೂ ಭೇಟಿ ನೀಡ್ತಾರೆ. ಇದೀಗ ದೇವಾಲಯದ ಹುಂಡಿಯಲ್ಲೀಗ ಪ್ರೇಮಿಗಳ ಪೋಟೋ, ಲವ್ ಲೆಟರ್​​ ಸೇರಿದಂತೆ ಚಿತ್ರ ವಿಚಿತ್ರ ನಿವೇದನೆಗಳ ಪತ್ರಗಳು ಪತ್ತೆಯಾಗಿವೆ.

ನಂದಿ ಗಿರಿಧಾಮದ ತಪ್ಪಲಿನಲ್ಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯಕ್ಕೆ ಆಡಳಿತ ಮಂಡಳಿ ಮುಂದಾಗಿದೆ. ಸುಮಾರು 15 ಲಕ್ಷ ರೂಪಾಯಿ ಕಾಣಿಕೆಯ ಜೊತೆಗೆ ಪ್ರೇಮ ನಿವೇದನೆ ಸೇರಿ ದೇವರಿಗೆ ಸಲ್ಲಿಸಿರುವ ಹಲವು ಬೇಡಿಕೆಯ ಪತ್ರಗಳು ಕಂಡುಬಂದಿವೆ.

ಮಹಿಳೆಯೋರ್ವರ ಫೋಟೋ ಹಿಂದೆ ಪದ್ಮಾ ಮತ್ತೆ ತಿರುಗಿ ಬಾ ಎನ್ನುವ ಪ್ರೇಮ ನಿವೇದನೆಯ ಬರಹ ಇದೆ. ಮತ್ತೊಂದು ಚೀಟಿಯಲ್ಲಿ, ನಾನು ಪ್ರೀತಿಸುತ್ತಿರುವ ಹುಡುಗಿಯ ತಂದೆ-ತಾಯಿ ನಮ್ಮನ್ನ ಸಂಪೂರ್ಣ ಮುಕ್ತ ಮನಸ್ಸಿನಿಂದ ಒಪ್ಪುವಂತೆ ಮಾಡು ಭಗವಂತ. ನಾನು ಅವಳನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ, ಯಾವುದೇ ತೊಂದರೆ ಆಗದೇ ಒಪ್ಪುವಂತೆ ಮಾಡು ಎಂದು ಬರೆಯಲಾಗಿದೆ. ಮತ್ತೊಂದಿಷ್ಟು ಚೀಟಿಯಲ್ಲಿ ನನ್ನ ಗಂಡನಿಗೆ ಒಳ್ಳೆಯ ಕೆಲಸ ಸಿಗಲಿ, ನನ್ನ ಮಗ ಚೆನ್ನಾಗಿ ಓದಲಿ ಎಂದು ಬರೆದಿರೋದು ಕಂಡುಬಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ದೇಗುಲದ ಕಾರ್ಯನಿರ್ವಹಣಾ ಅಧಿಕಾರಿ ರುಕ್ಮಿಣಿ, ಹರಕೆ ಕಾಣಿಕೆಯ ಜೊತೆ ಕೆಲವು ಭಕ್ತರು ತಮ್ಮ ಬೇಡಿಕೆಗಳನ್ನು ಬರಹದ ಮುಖೇನ ಸಲ್ಲಿಸಿರೋದು ಕಂಡುಬಂದಿದೆ. ಕೆಲವು ಭಕ್ತರು ಬರೆದಿರುವ ಬರಹಗಳು ನಮಗೆ ನಗಣ್ಯ ಅನಿಸಬಹುದು. ಆದರೆ ಅದು ಅವರ ಪಾಲಿಗೆ ದೊಡ್ಡದಿರಬಹುದು. ಹುಂಡಿಯಲ್ಲಿ ಸಿಕ್ಕ ಎಲ್ಲ ಚೀಟಿಗಳನ್ನು ನಾವು ನೋಡಿಲ್ಲ. ಅವುಗಳನ್ನು ಎತ್ತಿಟ್ಟಿದ್ದೇವೆ. ಸಣ್ಣ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಗಳೂ ಹುಂಡಿಯಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

error: Content is protected !!