ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಹಾರಾಟವಾದ ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಕಂಡಿದೆ.
ಟೇಕ್ ಆಫ್ ಆದ AI-830 ವಿಮಾನದ ಎಂಜಿನ್‌ನಲ್ಲಿ ಕಡಿಮೆ ಇಂಧನ, ಶೂನ್ಯ ಒತ್ತಡ ಇರುವುದನ್ನು ಪೈಲಟ್ಗಳು ಪತ್ತೆ ಮಾಡಿದ್ದಾರೆ. ತಕ್ಷಣವೇ ವಾಯು ಸಂಚಾರ ನಿಯಂತ್ರಣ (ಎಟಿಸಿ) ಕೊಠಡಿಗೆ PAN- PAN ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಎಟಿಸಿ ತಿರುವನಂತಪುರಂಗೆ ವಾಪಸ್ ಬರಲು ಸೂಚಿಸಿದೆ. ನಂತರ ವಿಮಾನವನ್ನು ಸುರಕ್ಷಿತವಾಗಿ ತುರ್ತಾಗಿ ಇಳಿಸಲಾಯಿತು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಸ್ಥಳಾಂತರಿಸಲಾಯಿತು. ತಾಂತ್ರಿಕ ಪರಿಶೀಲನೆಗಾಗಿ ವಿಮಾನವನ್ನು ಭೂಮಿಗೆ ಇಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ ಗುಪ್ತನ್ ಹೇಳಿದ್ದಾರೆ.
ಏನಿದು PAN- PAN ಅಲರ್ಟ್?:
ಯಾವುದೇ ವಿಮಾನ ಹಾರಾಟದ ವೇಳೆ ಸಮಸ್ಯೆ ಕಂಡು ಬಂದಾಗ ಅದರ ಪೈಲಟ್ಗಳು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ತಕ್ಷಣವೇ ಮಾಹಿತಿ ನೀಡುತ್ತಾರೆ. ಸಮಸ್ಯೆಯ ಆಧಾರದ ಮೇಲೆ ಪೈಲಟ್ಗಳು ಮೇ ಡೇ ಹಾಗೂ ಪಾನ್ ಪಾನ್ ಎಂಬ ಎಚ್ಚರಿಕೆ ನೀಡುತ್ತಾರೆ.
PAN- PAN ಎಂದರೆ, ವಿಮಾನದಲ್ಲಿ ದೋಷ ಕಂಡುಬಂದಾಗ ಪ್ರಯಾಣ ಮುಂದುವರಿಸುವುದು ಅಪಾಯ ಎಂದರಿತು ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಲು ಕೋರುವುದು.



