Thursday, October 2, 2025

ಮದ್ದೂರು ಗಣೇಶ ವಿಸರ್ಜನೆ ಗಲಭೆ | 21 ಜನರನ್ನು ಬಂಧಿಸಲಾಗಿದೆ: ಚಲುವರಾಯಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕಲ್ಲುತೂರಾಟ ನಡೆದಿರುವ ಘಟನೆ ಉದ್ವಿಗ್ನತೆ ಸೃಷ್ಟಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು 21 ಜನರನ್ನು ಬಂಧಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಷಯವನ್ನು ಖುದ್ದು ಗಮನಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಸಚಿವರು, “ಯಾವ ಹಿಂದುಗಳ ಮೇಲೂ ಪ್ರಕರಣ ದಾಖಲಾಗಿಲ್ಲ. ಇಷ್ಟು ಬೇಗ ಕ್ರಮ ತೆಗೆದುಕೊಂಡ ಪ್ರಕರಣವೇ ಇಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚೋದನೆ ಮಾಡುತ್ತಿದ್ದಾರೆ. ಬಿಗಿಕ್ರಮಗಳನ್ನು ಹೆಚ್ಚಿಸಬೇಕೆಂದು ಹೇಳಬಹುದು, ಆದರೆ ಕೋಮುಗಲಭೆಗೆ ಪ್ರಚೋದನೆ ಕೊಡುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

ಮದ್ದೂರಿನಲ್ಲಿ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. “ಹೊರಗಿನಿಂದ ಬಂದು ಕೆಲವರು ಗಲಭೆಗೆ ಕಾರಣರಾಗಿರಬಹುದು ಎಂಬ ಅನುಮಾನವಿದೆ. ಮಂಗಳೂರಿನಿಂದ ಪಾಂಡವಪುರ, ನಾಗಮಂಗಲ ಪ್ರದೇಶಗಳಲ್ಲೂ ಇದೇ ರೀತಿಯ ಪ್ರಯತ್ನ ನಡೆದಿತ್ತು. ಈ ಬಾರಿ ಮುಂಚಿತ ಎಚ್ಚರಿಕೆ ವಹಿಸಿದ್ದೇವೆ” ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮೇಲೆ ಅವರು ತೀವ್ರ ಕಿಡಿಕಾರಿದ್ದು, “ವಿಧಾನಸಭೆಯಲ್ಲಿ ನಮ್ಮನ್ನು ಎದುರಿಸಲು ಅವರಿಗೆ ಆಗುತ್ತಿಲ್ಲ. ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತಡೆಯಲು ಪ್ರಚೋದನೆ ನೀಡುತ್ತಿದ್ದಾರೆ. ಇದು ಪೂರ್ವನಿಯೋಜಿತವಾಗಿ ನಡೆದಿದೆ” ಎಂದು ಸಚಿವರು ಆರೋಪಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿರುವ ಚಲುವರಾಯಸ್ವಾಮಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. “ಮುಂದೆ ಇಂತಹ ದುರ್ವರ್ತನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರೂ ಸಹಕಾರ ನೀಡಬೇಕು ಹಾಗೂ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡಬಾರದು” ಎಂದು ಮನವಿ ಮಾಡಿದ್ದಾರೆ.