Saturday, November 15, 2025

ನಾಡಿಗೆ ಬಂದ ಮಹಾಬಲಿಗಳು: ಮೈಸೂರಿನಲ್ಲಿ 21 ಹುಲಿಗಳ ಇರುವಿಕೆ ದೃಢ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ಮಿತಿಮೀರಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆಯೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಒಂದಲ್ಲ-ಎರಡಲ್ಲ ಬರೋಬ್ಬರಿ 21 ಹುಲಿಗಳು ಈ ಭಾಗದಲ್ಲಿ ಬೀಡು ಬಿಟ್ಟಿರುವುದು ದೃಢಪಟ್ಟಿದೆ.

ಇತ್ತೀಚೆಗೆ ಎಚ್‌.ಡಿ. ಕೋಟೆ ಮತ್ತು ಸರಗೂರು ಭಾಗಗಳಲ್ಲಿ ಹುಲಿ ದಾಳಿಗಳು ಹೆಚ್ಚಾಗಿದ್ದು, ದುರದೃಷ್ಟವಶಾತ್ ಮೂವರು ರೈತರು ಬಲಿಯಾಗಿದ್ದರು. ಈ ಘಟನೆಗಳ ಬೆನ್ನಲ್ಲೇ ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ನಡೆಸಿ ಉಪಟಳ ನೀಡುತ್ತಿದ್ದ ಒಂದು ಹುಲಿಯನ್ನು ಸೆರೆಹಿಡಿದಿತ್ತು. ಅಲ್ಲದೆ, ಕಾಡಂಚಿನ ರೈತರ ರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು.

ಈ ಗಂಭೀರ ಬೆಳವಣಿಗೆಗಳ ನಡುವೆಯೇ ಡಿಸಿಎಫ್ ಪರಮೇಶ್ ಅವರು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ ಪರಿಸ್ಥಿತಿಯ ಗಂಭೀರತೆಯನ್ನು ಬಹಿರಂಗಪಡಿಸಿದ್ದಾರೆ. ಅವರ ಮಾಹಿತಿ ಪ್ರಕಾರ, ಎಚ್‌.ಡಿ. ಕೋಟೆ, ಸರಗೂರು ಮತ್ತು ನಂಜನಗೂಡು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಒಟ್ಟು 21 ಹುಲಿಗಳು ಸಂಚರಿಸುತ್ತಿವೆ.

ಡಿಸಿಎಫ್ ಪರಮೇಶ್ ಹೇಳಿದ್ದೇನು? ಒಟ್ಟಾರೆಯಾಗಿ 26 ಹುಲಿಗಳು ಕಾಡಿನಿಂದ ನಾಡಿನತ್ತ ಬಂದಿದ್ದವು. ಅವುಗಳಲ್ಲಿ 5 ಹುಲಿಗಳನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಆದರೆ, ಇನ್ನೂ 21 ಹುಲಿಗಳು ನಾಡಿನಲ್ಲೇ ಓಡಾಡುತ್ತಿದ್ದು, ಜನರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಮಾನವ ಜೀವ ಅತ್ಯಮೂಲ್ಯವಾಗಿರುವುದರಿಂದ, ಅರಣ್ಯ ಇಲಾಖೆಯು ಸ್ಥಳೀಯರ ಸಹಕಾರದೊಂದಿಗೆ ಹೆಡಿಯಾಲ ಉಪವಿಭಾಗದ ಮೂರು ಪ್ರತ್ಯೇಕ ಕಡೆಗಳಲ್ಲಿ ಹುಲಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಬೃಹತ್ ಮಟ್ಟದ ಹುಲಿ ಸಂಚಾರದ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆ 2014 ಮತ್ತು 2018-19ರಲ್ಲೂ ಇಂತಹ ಸನ್ನಿವೇಶಗಳು ಎದುರಾಗಿದ್ದವು. ಈಗಿನ ಘಟನೆ ತಾನು ಕಂಡಂತೆ ಮೂರನೇ ಬಾರಿ ಎಂದು ಡಿಸಿಎಫ್ ಪರಮೇಶ್ ಉಲ್ಲೇಖಿಸಿದ್ದಾರೆ. ಸ್ಥಳೀಯರ ರಕ್ಷಣೆ ಮತ್ತು ಹುಲಿಗಳ ಸುರಕ್ಷತೆಗಾಗಿ ಅರಣ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ.

error: Content is protected !!