ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಶೀಘ್ರ ಜಾಮೀನು ಸಿಗುವಂತೆ ಅವರ ಅಭಿಮಾನಿ ಬಳಗ ಮತ್ತು ಅಭಿನವ ಭಾರತ ಮಿತ್ರಮಂಡಳಿಯಿಂದ ಶುಕ್ರವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೇಕ ಸೇವೆ ಮಾಡಲಾಯಿತು.
ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದಲ್ಲಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಸಂದರ್ಭ ಅಭಿನವ ಭಾರತ ಮಿತ್ರ ಮಂಡಳಿಯ ದಿನೇಶ್ ಜೈನ್, ನವೀನ್ ಕುಲಾಲ್, ಧನ್ಯ ಕುಮಾರ್ ಬೆಳಂದೂರು ಮೊದಲಾದವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಲಾಯಿತು. ಅರ್ಚಕ ಉದಯ ಭಟ್ ಪ್ರಾರ್ಥನೆ ನೆರವೇರಿಸಿದರು.
ಬಳಿಕ ಮಾಧ್ಯಮದೊಂದಿಗೆ ದಿನೇಶ್ ಕುಮಾರ್ ಜೈನ್ ಮತ್ತು ನವೀನ್ ಕುಲಾಲ್ ಅವರು ಮಾತನಾಡಿ, ಸೌಜನ್ಯನ ಹತ್ಯೆಯಾದ ಬಳಿಕ ಆಕೆಯ ಕುಟುಂಬಕ್ಕೆ ನ್ಯಾಯಾಕ್ಕಾಗಿ ಮತ್ತು ಅಲ್ಲಿ ಆದಂತಹ ಇತರ ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ನಿಜವಾದ ಹಿಂದು ಕಾರ್ಯಕರ್ತನಾಗಿ ತಿಮರೋಡಿ ಹೋರಾಟ ಮಾಡುತ್ತಿದ್ದಾರೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕೂಡಾ ಎಸ್.ಐ.ಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಈ ನಡುವೆ ವಿಘ್ನಸಂತೋಷಿಗಳು ಇದರಲ್ಲಿ ರಾಜಕೀಯ ಮಾಡುವ ಮೂಲಕ ತಿಮರೋಡಿಯವರ ನಿಜವಾದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಬಿ.ಎಲ್. ಸಂತೋಷ್ ಅವರ ಮೇಲೆ ಹೇಳಿಕೆ ಆಧಾರದಲ್ಲಿ ಕ್ಷುಲಕ ಕಾರಣಕ್ಕೆ ತಿಮರೋಡಿಯವರನ್ನು ಬಂಧಿಸಿದ್ದಾರೆ. ಈ ಬಂಧನದಿಂದ ಅವರು ಶೀಘ್ರ ಬಿಡುಗಡೆಗೊಳ್ಳಬೇಕು. ಹಿಂದು ಸಮಾಜಕ್ಕೆ ಮತ್ತೆ ಅವರು ಶಕ್ತಿ ತುಂಬಬೇಕು. ಇಡೀ ಹಿಂದು ಸಮಾಜ ಅವರ ಜೊತೆಗಿದೆ ಎಂದು ತೋರಿಸುವ ನಿಟ್ಟಿನಲ್ಲಿ ನಾವು ಇವತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.