January22, 2026
Thursday, January 22, 2026
spot_img

ಮೆಕ್ಕೆಜೋಳ ಬೆಲೆ ಕುಸಿತ: ರೈತರಿಂದ ನೇರ ಖರೀದಿಗೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಕ್ಕೆಜೋಳ ಮಾರುಕಟ್ಟೆಯಲ್ಲಿ ಕಂಡುಬಂದ ತೀವ್ರ ಬೆಲೆ ಕುಸಿತವು ರೈತರ ಬದುಕಿನ ಮೇಲೆ ದೊಡ್ಡ ಹೊಡೆತ ನೀಡಿದೆ. ಕೈಗೆ ಬಂದ ಬೆಳೆಗೂ ತಕ್ಕಮಟ್ಟಿನ ದರ ಸಿಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಹೋರಾಟದ ಒತ್ತಡದ ನಡುವೆಯೇ ರಾಜ್ಯ ಸರ್ಕಾರವು ಕರ್ನಾಟಕ ಹಾಲು ಮಹಾಮಂಡಳಿಗೆ ಅಗತ್ಯವಿರುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸಲು ಆದೇಶ ಹೊರಡಿಸಿದೆ. ನವೆಂಬರ್ 25ರಂದು ಅಧಿಸೂಚನೆ ಹೊರಡಿಸಿದ್ದು, 2025–26ರ ಸಾಲಿನಲ್ಲಿ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್‌ಗೆ 2400 ರೂ. ದರದಲ್ಲಿ ಖರೀದಿ ಮಾಡಲು ಸೂಚಿಸಲಾಗಿದೆ.

ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮೊದಲು ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತ ಸಂಘಟನೆಗಳು ಸರ್ಕಾರಕ್ಕೆ ಗಟ್ಟಿಯಾದ ಎಚ್ಚರಿಕೆ ನೀಡಿವೆ.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಪಾರದರ್ಶಕತಾ ಕಾಯಿದೆಯಿಂದ ವಿನಾಯಿತಿ ನೀಡಿ ಸಮಂಜಸ ದರದಲ್ಲಿ ಉತ್ತಮ ಗುಣಮಟ್ಟದ ಮೆಕ್ಕೆಜೋಳ ಸಂಗ್ರಹಿಸಲು ನಿರ್ದೇಶನ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಒಟ್ಟು ಉತ್ಪಾದನೆಯ ಹೋಲಿಕೆಗೆ ಈ ಪ್ರಮಾಣ ಕಡಿಮೆ ಎಂಬ ಆಕ್ರೋಶ ಇನ್ನೂ ಉಳಿದಿದ್ದು, ಅಧಿಕೃತ ಖರೀದಿ ಕೇಂದ್ರಗಳನ್ನು ತೆರೆಯದೇ ರೈತರಿಗೆ ನಿಜವಾದ ಲಾಭ ಸಿಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Must Read