ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಡಿಜಿಟಲ್ ಪೇಮೆಂಟ್ ಮತ್ತಷ್ಟು ಸರಳೀಕರಿಸಲು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ವಿಮಾ ಕಂತುಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಪ್ರಯಾಣ ಮತ್ತು ಸರ್ಕಾರಿ ಪಾವತಿಗಳಂತಹ ಆಯ್ದ ವ್ಯಾಪಾರಿ ವರ್ಗಗಳಿಗೆ ಸಿಹಿ ಸುದ್ದಿ ನೀಡಿದೆ.
ಇನ್ಮುಂದೆ UPI ಮೂಲಕ 24 ಗಂಟೆಗಳಲ್ಲಿ 10 ಲಕ್ಷ ರೂಪಾಯಿವರೆಗೆ ವಹಿವಾಟು ಮಾಡಬಹುದು. ವಿಶೇಷವಾಗಿ ತೆರಿಗೆ ಪಾವತಿ ಮತ್ತು ಇತರ ಹಣಕಾಸು ಸೇವೆಗಳಿಗೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.
ಈ ನಿಯಮ ಸೆಪ್ಟೆಂಬರ್ 15ರಿಂದ ಜಾರಿಗೆ ಬರಲಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಗಮನದಲ್ಲಿಟ್ಟುಕೊಂಡು NPCI ಈ ಕ್ರಮ ತೆಗೆದುಕೊಂಡಿದೆ.
ಹೊಸ ನಿಯಮದೊಂದಿಗೆ NPCI ಬ್ಯಾಂಕುಗಳಿಗೆ ಪಾಲಿಸಿ ಮತ್ತು ಭದ್ರತಾ ಮಾನದಂಡಗಳ ಪ್ರಕಾರ ಆಂತರಿಕ ವಹಿವಾಟು ಮಿತಿಗಳನ್ನು ನಿರ್ಧರಿಸುವ ಸ್ವಾತಂತ್ರ್ಯ ನೀಡಲಾಗಿದೆ. 24-ಗಂಟೆಗಳಲ್ಲಿ ಗರಿಷ್ಠ ಮಿತಿ 10 ಲಕ್ಷ ರೂಪಾಯಿಗೆ ಮೀರಬಾರದು. ಇದು ಇಎಂಐ, ಹೂಡಿಕೆಗಳು, ಸರ್ಕಾರಿ ಪಾವತಿಗಳು ಮುಂತಾದ ಹೆಚ್ಚಿನ ಮೌಲ್ಯದ ವಹಿವಾಟುಗಳ ತ್ವರಿತ ಪ್ರಕ್ರಿಯೆಗೆ ಅನುಕೂಲ ಆಗಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ ವಹಿವಾಟಿನ ಮಿತಿ ದಿನಕ್ಕೆ 1 ಲಕ್ಷ ರೂಪಾಯಿಯಲ್ಲೇ ಉಳಿಯುತ್ತದೆ.
ಪ್ರಮುಖ UPI ನಿಯಮಗಳು
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳು: ಪ್ರತಿ ವಹಿವಾಟಿನ ಮಿತಿ 5 ಲಕ್ಷ ರೂಪಾಯಿ, ದೈನಂದಿನ ಮಿತಿ 6 ಲಕ್ಷ ರೂಪಾಯಿ
ಸಾಲ ಮತ್ತು ಇಎಂಐ ಪಾವತಿ: ಪ್ರತಿ ವಹಿವಾಟಿಗೆ 5 ಲಕ್ಷ, ದೈನಂದಿನ ಮಿತಿ 10 ಲಕ್ಷ ರೂಪಾಯಿ
ಬಂಡವಾಳ ಮಾರುಕಟ್ಟೆ ಹೂಡಿಕೆಗಳು ಮತ್ತು ವಿಮಾ ಪಾವತಿ: ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿ, ದೈದಿನ ಮಿತಿ 10 ಲಕ್ಷಗಳು
ಪ್ರಯಾಣ ಪಾವತಿಗಳು: ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿವರೆಗೆ
ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಮತ್ತು ತೆರಿಗೆ ಪಾವತಿ: ಹಿಂದಿನ ಮಿತಿ 1 ಲಕ್ಷ ರೂಪಾಯಿ ಆಗಿತ್ತು. ಹೊಸ ನಿಯಮದ ಪ್ರಕಾರ ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿ
ವಿದೇಶಿ ವಿನಿಮಯ: ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿ, ದೈನಂದಿನ ಮಿತಿ ₹5 ಲಕ್ಷ