January22, 2026
Thursday, January 22, 2026
spot_img

ಕತಾರ್‌ ಏರ್‌ವೇಸ್‌ ವಿಮಾನದಲ್ಲಿ ಮಹಾ ಎಡವಟ್ಟು: ಉಸಿರುಗಟ್ಟಿ ಪ್ರಯಾಣಿಕ ಸಾವು, ಅಸಲಿ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲೊಂಬೊ: ಕತಾರ್ ಏರ್‌ವೇಸ್ ವಿಮಾನದಲ್ಲಿ 85 ವರ್ಷದ ಸಸ್ಯಾಹಾರಿ ಪ್ರಯಾಣಿಕನೊಬ್ಬ ಮಾಂಸಾಹಾರಿ ಊಟ ಸೇವಿಸಿ ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ದಕ್ಷಿಣ ಕ್ಯಾಲಿಫೋರ್ನಿಯಾದ ನಿವೃತ್ತ ಹೃದ್ರೋಗ ತಜ್ಞರಾಗಿದ್ದ ಡಾ. ಅಶೋಕ ಜಯವೀರ (85) ಅವರು ಕತಾರ್ ಏರ್‌ವೇಸ್ ವಿಮಾನದಲ್ಲಿ ಮಾಂಸಾಹಾರಿ ಊಟ ಸೇವಿಸಿ ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಮೃತ ಪ್ರಯಾಣಿಕರ ಪುತ್ರರು ವಿಮಾನಯಾನ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಡಾ. ಜಯವೀರ ಅವರು ಲಾಸ್ ಏಂಜಲೀಸ್‌ನಿಂದ ಕೊಲಂಬೊಗೆ ಪ್ರಯಾಣಿಸುತ್ತಿದ್ದರು. ಅವರು ಮೊದಲೇ ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದರು. ಆದರೆ, ವಿಮಾನದ ಸಿಬ್ಬಂದಿ ಸಸ್ಯಾಹಾರಿ ಊಟ ಲಭ್ಯವಿಲ್ಲ ಎಂದು ತಿಳಿಸಿ, ಬದಲಿಗೆ ಮಾಂಸಾಹಾರಿ ಊಟವನ್ನು ತಂದುಕೊಟ್ಟಿದ್ದಾರೆ. ಸಹ-ಪ್ರಯಾಣಿಕರ ಸಲಹೆಯ ಮೇರೆಗೆ ಡಾ. ಜಯವೀರ ಅವರು ಆ ಮಾಂಸಾಹಾರ ಊಟವನ್ನು ಸೇವಿಸಲು ಮುಂದಾದರು.


ಈ ವೇಳೆ ಅವರಿಗೆ ಉಸಿರುಗಟ್ಟುವಿಕೆ ಉಂಟಾಗಿ ಪ್ರಜ್ಞೆ ಕಳೆದುಕೊಂಡರು. ಕೂಡಲೇ ಅವರನ್ನು ಎಚ್ಚರಿಸಲು ಪ್ರಯತ್ನಿಸಲಾಯಿತಾದರೂ, ಅವರ ಸ್ಥಿತಿ ಹದಗೆಟ್ಟಿತು. ತುರ್ತು ವೈದ್ಯಕೀಯ ನೆರವಿಗಾಗಿ ವಿಮಾನವನ್ನು ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ಇಳಿಸಲಾಯಿತು ಮತ್ತು ಡಾ. ಜಯವೀರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಾಗಲೇ ಅವರು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವರು ಆಸ್ಪಿರೇಷನ್ ನ್ಯುಮೋನಿಯಾದಿಂದ ನಿಧನರಾಗಿರುವುದು ದೃಢಪಟ್ಟಿದೆ.

ಈ ಘಟನೆ ಕುರಿತು ಡಾ. ಜಯವೀರ ಅವರ ಪುತ್ರರು ಕತಾರ್ ಏರ್‌ವೇಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ವಿಮಾನಯಾನ ಸಂಸ್ಥೆಯು ಊಟ ಮತ್ತು ವೈದ್ಯಕೀಯ ತುರ್ತುಸೇವೆಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದಾರೆ.

Must Read