January19, 2026
Monday, January 19, 2026
spot_img

ಮನೆ ಕನಸು ನನಸು: ಜಮೀರ್ ಅಹ್ಮದ್ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮದ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಸತಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಡಿ ಹುಬ್ಬಳ್ಳಿಯಲ್ಲಿ ಜನವರಿ 24ರಂದು ಬೃಹತ್ ವಸತಿ ಹಕ್ಕುಪತ್ರ ವಿತರಣೆ ಹಾಗೂ ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದರು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಜಂಟಿ ಸಭೆ ನಡೆಸಿದ ಸಚಿವರು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದು, ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಸುಮಾರು 4,600 ಜನರಿಗೆ ಹಕ್ಕುಪತ್ರ ನೀಡಲಾಗುವುದು.

ಒಟ್ಟು 42,000 ಮನೆಗಳ ಪೈಕಿ ಹುಬ್ಬಳ್ಳಿಯಲ್ಲಿ 1,008 ಮನೆಗಳು, ತುಮಕೂರಿನಲ್ಲಿ 1,000, ಬಳ್ಳಾರಿಯಲ್ಲಿ 2,500 ಹಾಗೂ ಯಾದಗಿರಿಯಲ್ಲಿ 1,000 ಮನೆಗಳನ್ನು ಆಯಾ ಜಿಲ್ಲೆಗಳಲ್ಲಿ ಅಂದೇ ಹಸ್ತಾಂತರಿಸಲಾಗುವುದು.

ಇದೇ ವೇಳೆ ನರೇಗಾ ವಿಶೇಷ ಅಧಿವೇಶನದ ಬಗ್ಗೆ ಮಾತನಾಡಿದ ಸಚಿವರು, “ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಶೇ. 90ರಷ್ಟು ಕೂಲಿ ಹಣವನ್ನು ನೀಡಬೇಕಿದೆ. ಈ ಬಾಕಿ ಹಣವನ್ನು ಕೇಂದ್ರ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.

ಸಭೆಗೂ ಮುನ್ನ ಸಚಿವರಾದ ಜಮೀರ್ ಅಹ್ಮದ್ ಹಾಗೂ ಸಂತೋಷ್ ಲಾಡ್ ಅವರು ಧಾರವಾಡ ಸರ್ಕೀಟ್ ಹೌಸ್‌ನಿಂದ ಜಿಲ್ಲಾ ಪಂಚಾಯ್ತಿವರೆಗೂ ನಡೆದುಕೊಂಡೇ ಬರುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸಭೆಯಲ್ಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಹೆಚ್.ಕೋನರಡ್ಡಿ, ಎಸ್.ಎಫ್.ಜಕ್ಕಪ್ಪನವರ ಹಾಗೂ ಶಿವಲೀಲಾ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Must Read