ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಆರ್‌ಎಸ್‌ಎಸ್ ನಿಷೇಧ ಮಾಡಬೇಕು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ದೇಶಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
“ಆರ್‌ಎಸ್‌ಎಸ್ ಸಂಘಟನೆಯನ್ನು ಯಾವ ಕಾರಣಕ್ಕೆ ನಿಷೇಧ ಮಾಡಬೇಕು ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ತಿಳಿಸಿಲ್ಲ. ದೇಶವನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನನ್ನಂತಹ ಲಕ್ಷಾಂತರ ಜನರಿಗೆ ಆರ್‌ಎಸ್‌ಎಸ್ ಸ್ಪೂರ್ತಿ ನೀಡಿದ ಸಂಘಟನೆ ಎಂಬುದು ಎಲ್ಲರಿಗೂ ಗೊತ್ತಿದೆ. ಆರ್‌ಎಸ್‌ಎಸ್ ಯುವಕರಲ್ಲಿ ದೇಶಭಕ್ತಿ ಮತ್ತು ಶಿಸ್ತಿನ ಮೌಲ್ಯಗಳನ್ನು ತುಂಬುತ್ತದೆ. ಆರ್‌ಎಸ್‌ಎಸ್‌ನಿಂದ ಹೊರಬಂದ ಇಬ್ಬರು ವ್ಯಕ್ತಿಗಳು ದೇಶದ ಪ್ರಧಾನಮಂತ್ರಿಗಳಾಗಿದ್ದಾರೆ. ಇಂತಹ ಸಂಘಟನೆಯನ್ನು ನಿಷೇಧ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿರುವುದು ನಿಜಕ್ಕೂ ಖಂಡನೀಯ” ಎಂದು ಗುಡುಗಿದ್ದಾರೆ.
ಆರ್‌ಎಸ್‌ಎಸ್ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರಂತಹ ಶ್ರೇಷ್ಠ ನಾಯಕರನ್ನು ಈ ದೇಶಕ್ಕೆ ಕೊಟ್ಟಿದೆ. ಇದು
ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಘಟನೆಯಾಗಿದ್ದು, ನಮ್ಮನ್ನು ರಾಷ್ಟ್ರಕ್ಕೆ ಸಮರ್ಪಿತರಾಗುವಂತೆ ಅದು ಸದಾ ಪ್ರೇರೆಪಿಸುತ್ತಿರುತ್ತದೆ” ಎಂದು ಅಮಿತ್ ಶಾ ಹೇಳಿದ್ದಾರೆ.
ದೇಶದ ಅಭಿವೃದ್ಧಿಗೆ, ಸಮಾಜಕ್ಕೆ ಸರಿಯಾದ ದಿಕ್ಕನ್ನು ತೋರಿಸಲು, ದೇಶದಲ್ಲಿ ಜನರನ್ನು ಒಟ್ಟುಗೂಡಿಸಲು ಮತ್ತು ಯುವಕರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಲು ಆರ್‌ಎಸ್‌ಎಸ್ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ. ಆದರೆ ಇಂತಹ ಸಂಘಟನೆಗೆ ನಿಷೇಧ ಹೇರಬೇಕು ಎಂದು ಹೇಳುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರ ಉದ್ದೇಶವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಅದು ಎಂದಿಗೂ ಈಡೇರುವುದಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.
ಖರ್ಗೆ ಹೇಳಿದ್ದೇನು?
ಧಾನಮಂತ್ರಿ ನರೇಂದ್ರ ಮೋದಿ ಅವರು ಪಟೇಲ್ ಅವರ ಅಭಿಪ್ರಾಯಗಳನ್ನು ಗೌರವಿಸುವುದು ನಿಜವೇ ಆದರೆ, ಆರ್‌ಎಸ್‌ಎಸ್ ಸಂಘಟನೆ ಮೇಲೆ ನಿಷೇಧ ಹೇರಬೇಕು. ಏಕೆಂದರೆ ಸರ್ದಾರ್ ಪಟೇಲ್ ಕೂಡ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

                                    