Saturday, September 20, 2025

ಉಕ್ಕಿ ಹರಿಯುತ್ತಿದ್ದ ನೀರಿನ ಪ್ರವಾಹದಲ್ಲಿ ಸೇತುವೆ ದಾಟುವ ಹುಚ್ಚಾಟ: ವ್ಯಕ್ತಿ ನೀರುಪಾಲು

ಹೊಸದಿಗಂತ ಬೀದರ್:

ಬೇಡ ಎಂದು ಸ್ಥಳೀಯರು ಎಷ್ಟೇ ತಿಳಿಹೇಳಿದರೂ ಮೊಂಡುತನ ಪ್ರದರ್ಶಿಸಿ ಉಕ್ಕಿ ಹರಿಯುತ್ತಿದ್ದ ನೀರಿನ ಪ್ರವಾಹದಲ್ಲೇ ಸೇತುವೆ ದಾಟುವ ಹುಚ್ಚಾಟಕ್ಕಿಳಿದ ವ್ಯಕ್ತಿಯೊಬ್ಬ ನೀರುಪಾಲಾದ ಘಟನೆ ತಾಲೂಕಿನ ಬರೂರ್ ಗ್ರಾಮದ ಹತ್ತಿರ ನಡೆದಿದೆ.

ಬರೂರ್ ಗ್ರಾಮದ ಪ್ರಭಾಕರ ರೆಡ್ಡಿ(62) ನೀರುಪಾಲಾಗಿದ್ದಾನೆ. ಭಾರಿ ಮಳೆಯಿಂದಾಗಿ ಗ್ರಾಮದ ಹೊರವಲಯದ ಸೇತುವೆ ತುಂಬಿ ಹರಿಯುತ್ತಿದೆ. ಇದನ್ನು ದಾಟಿ ಪಕ್ಕದ ರಾಜೋಳಾ ಗ್ರಾಮಕ್ಕೆ ಹೋಗಲು ಯತ್ನಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಸೇತುವೆ ಮೇಲೆ ನೀರಿನ ಮಟ್ಟ ಜಾಸ್ತಿಯಿದ್ದು, ರಭಸವೂ ಹೆಚ್ಚಿದೆ. ಸೇತುವೆ ದಾಟಬೇಡಿ ಎಂದು ಅಲ್ಲಿದ್ದ ಸ್ಥಳೀಯರು ಎಷ್ಟೇ ಹೇಳಿದರೂ ರೆಡ್ಡಿ ಕೇಳಲಿಲ್ಲ. ತಿಳಿಹೇಳಿದವರಿಗೆ ಇಣುಕಿಸುತ್ತ ನೀರಿಗಿಳಿದಿದ್ದಾನೆ. ಸ್ವಲ್ಪ ದೂರ ಹೋಗುತ್ತಲೇ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ಇದನ್ನು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗುರುವಾರ ಸಂಜೆ ಘಟನೆ ನಡೆದಿದೆ. ಮನ್ನಳ್ಳಿ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದು, ಶನಿವಾರ ಸಂಜೆ ಮೃತದೇಹ ಪತ್ತೆಯಾಗಿದೆ. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ