Tuesday, November 11, 2025

ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾದ ಮಹಿಳೆಗಾಗಿ 7 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬರಿಂದ 26 ವರ್ಷದ ಖಾಸಗಿ ಕಂಪನಿಯ ಬೆಂಗಳೂರಿನ ಉದ್ಯೋಗಿಯೊಬ್ಬರು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾರೆ.

ಆರೋಪಿಯನ್ನು ಕವಿಪ್ರಿಯಾ ಎಂದು ಗುರುತಿಸಲಾಗಿದೆ. ಈ ಘಟನೆ ನವೆಂಬರ್ 1 ರಂದು ಬೆಳಗಿನ ಜಾವ 12.30 ರಿಂದ ಬೆಳಿಗ್ಗೆ 7 ಗಂಟೆಯ ನಡುವೆ ನಡೆದಿದೆ. ನಾಗಸಂದ್ರದ ಎಚ್‌ಎಂಟಿ ಲೇಔಟ್‌ನಲ್ಲಿರುವ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸಿಸುತ್ತಿರುವ ಸಂತ್ರಸ್ತ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಡೇಟಿಂಗ್ ಆ್ಯಪ್‌ನಲ್ಲಿ ಕವಿಪ್ರಿಯಾ ಅವರನ್ನು ಭೇಟಿಯಾದ ನಂತರ, ಅವರು ಫೋನ್ ಸಂಪರ್ಕದಲ್ಲಿದ್ದರು. ಜೊತೆಗೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 31 ರಂದು ಇಂದಿರಾನಗರದಲ್ಲಿ ಅವರು ಭೇಟಿಯಾದರು ಮತ್ತು ಸಂಜೆ 12 ನೇ ಮುಖ್ಯ ರಸ್ತೆಯಲ್ಲಿರುವ ಕಾಕ್‌ಟೈಲ್ ಬಾರ್‌ಗೆ ಇಬ್ಬರೂ ಹೋಗಿದ್ದರು.

ರಾತ್ರಿ ತಡವಾಗಿದ್ದರಿಂದ ತನ್ನ ಪೇಯಿಂಗ್ ಗೆಸ್ಟ್ ವಸತಿಗೃಹಕ್ಕೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಹೇಳಿದ ಕವಿಪ್ರಿಯಾ ಯುವಕನನ್ನು ಹತ್ತಿರದ ಹೋಟೆಲ್‌ಗೆ ಕರೆದೊಯ್ದು ರೂಮ್ ಬುಕ್ ಮಾಡಿದರು. ಇಬ್ಬರು ರಾತ್ರಿ 12.30 ರ ಸುಮಾರಿಗೆ ಊಟ ಮಾಡಿದರು.

ನಂತರ ಆಕೆ ಅವನಿಗೆ ಕುಡಿಯಲು ಕೆಲವು ಮತ್ತು ಬರುವ ಔಷಧಿ ನೀಡಿ ನೀರು ಕೊಟ್ಟಿದ್ದಾಳೆ. ಶೀಘ್ರದಲ್ಲೇ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬೆಳಿಗ್ಗೆ ಎದ್ದಾಗ ಅವನ ಚಿನ್ನದ ಸರ, ಚಿನ್ನದ ಕಡ (ಬಳೆ), ಹೆಡ್‌ಸೆಟ್ ಮತ್ತು 10,000 ರೂ. ನಗದು ಕಾಣೆಯಾಗಿರುವುದು ತಿಳಿದಿದೆ.

ದೀಪಕ್ ಕವಿಪ್ರಿಯಾಗೆ ಹಲವಾರು ಬಾರಿ ಕರೆ ಮಾಡಿದರೂ ಅವಳು ಪ್ರತಿಕ್ರಿಯಿಸಲಿಲ್ಲ. ಆ ಮಹಿಳೆ ಅಪರಾಧಿಯಾಗಿದ್ದು, ಅನೇಕ ಪುರುಷರನ್ನು ಬೇರೆ ಬೇರೆ ಹೆಸರುಗಳಲ್ಲಿ ವಂಚಿಸಿರಬೇಕು ಎಂದು ನಾವು ಅನುಮಾನಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕಳ್ಳತನ ಮತ್ತು ವಂಚನೆ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!