January22, 2026
Thursday, January 22, 2026
spot_img

ನ್ಯಾಯಾಲಯದಲ್ಲೇ ವಿಷ ಕುಡಿದ ವ್ಯಕ್ತಿ: ಸಾ*ವು-ಬದುಕಿನ ನಡುವೆ ಹೋರಾಟ

ಹೊಸದಿಗಂತ ಪುತ್ತೂರು:

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬರು ನ್ಯಾಯಾಧೀಶರ ಮುಂದೆಯೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.

ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆಯಷ್ಟೇ ರವಿ ತನ್ನ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ವಿಷಯವಾಗಿ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆಯಿತ್ತು.

ದಂಪತಿಗಳ ನಡುವೆ ವಿಚ್ಛೇದನದ ಮಾತುಕತೆ ನಡೆಯುತ್ತಿತ್ತು. ಇಂದು ವಿಚಾರಣೆಗಾಗಿ ಪೊಲೀಸರು ರವಿಯನ್ನು ಠಾಣೆಗೆ ಬರುವಂತೆ ಸೂಚಿಸಿದ್ದರು. ಆದರೆ, ರವಿ ನೇರವಾಗಿ ನ್ಯಾಯಾಲಯದ ಆವರಣಕ್ಕೆ ಬಂದು ನ್ಯಾಯಾಧೀಶರ ಮುಂದೆಯೇ ತಾನು ತಂದಿದ್ದ ‘ಕರಾಟೆ’ ಎಂಬ ಕೀಟನಾಶಕವನ್ನು ಸೇವಿಸಿದ್ದಾನೆ. ರವಿಯ ನಡವಳಿಕೆಯನ್ನು ಗಮನಿಸಿದ್ದ ನ್ಯಾಯಾಧೀಶರು ಮುನ್ನೆಚ್ಚರಿಕೆಯಾಗಿ ಸಿಬ್ಬಂದಿಗೆ ಮೊದಲೇ ಸೂಚನೆ ನೀಡಿದ್ದರು ಎನ್ನಲಾಗಿದೆ.

ವಿಷ ಸೇವಿಸಿದ ಕೂಡಲೇ ರವಿ ನ್ಯಾಯಾಲಯದ ಆವರಣದಲ್ಲೇ ವಾಂತಿ ಮಾಡಿಕೊಂಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಘಟನೆಯ ನಂತರ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಗಂಡ-ಹೆಂಡತಿಯ ಜಗಳ ಮರೆತು, ವಿಷ ಸೇವಿಸಿದ ಪತಿಯನ್ನು ರಕ್ಷಿಸಲು ವಿದ್ಯಾಶ್ರೀ ಧಾವಿಸಿದ್ದಾರೆ. ಮಂಗಳೂರಿಗೆ ತೆರಳುವ ಆಂಬ್ಯುಲೆನ್ಸ್‌ನಲ್ಲಿ ಪತ್ನಿಯೂ ಜೊತೆಯಾಗಿ ಹೋಗಿದ್ದು, ಸಾವಿನ ಅಂಚಿನಲ್ಲಿ ದಂಪತಿಗಳು ಒಂದಾದ ದೃಶ್ಯ ಕಂಡುಬಂದಿತು.

Must Read