ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿಯಿಂದಲೇ ಕಲ್ಲು ತೂರಾಟ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟ ಮಾಡಲಾಗುತ್ತಿದೆ. ಪೊಲೀಸರು ೨೧ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಮಸೀದಿ ಮುಂದೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ಉಂಟಾಗಿದ್ದು, ಈ ವೇಳೆ ಕೆಲ ಕಿಡಿಗೇಡಿಗಳಿಂದಲೂ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಸದ್ಯ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಭುಗಿಲೆದಿದೆ. ಒಂದು ಕಡೆ ಪೊಲೀಸರ ಜೊತೆಗೆ ವಾಗ್ವಾದ ನಡೆದಿದ್ದರೆ, ಮತ್ತೊಂದು ಕಡೆ ಯುವಕರ ಗುಂಪು ರಸ್ತೆಯಲ್ಲೇ ಕುಳಿತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಮಸೀದಿ ಮುಂದೆ ಡಿಜೆ ಹಾಕಿ ಗಣಪತಿ ಮೆರವಣಿಗೆ ಮಾಡಿದ್ದಾರೆ.
ಈ ವೇಳೆ ಮಸೀದಿ ಜಾಗ ಬಿಟ್ಟು ಹೋಗುವಂತೆ ಪೊಲೀಸರು ಹೇಳಿದ್ದಾರೆ. ಹೀಗಿದ್ದರೂ ಘೋಷಣೆ ಕೂಗುತ್ತ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಎಲ್ಲರೂ ಓಡಿ ಹೋಗಿದ್ದಾರೆ.
ಈ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ತುರ್ತು ಚರ್ಚೆ ನಡೆಸಿದ್ದು, ಪೊಲೀಸರಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರಿಗೆ ಕರೆ ಮಾಡಿ ವಿವರವಾದ ಮಾಹಿತಿಯನ್ನು ಪಡೆದಿರುವ ಮುಖ್ಯಮಂತ್ರಿಗಳು, ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಣಕ್ಕೆ ತರಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.