ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಿಎಂ ಸ್ಟಾಲಿನ್ ಹಾಗು ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಇದೀಗ ರಾಜ್ಯಪಾಲರ ಭಾಷಣದೊಂದಿಗೆ ವರ್ಷದ ಮೊದಲ ವಿಧಾನಮಂಡಲ ಅಧಿವೇಶನವನ್ನು ಪ್ರಾರಂಭಿಸುವ ಅಭ್ಯಾಸವನ್ನು ಅಂತ್ಯಗೊಳಿಸಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಸಮಾನ ಮನಸ್ಕ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ಸಂಸತ್ತಿನಲ್ಲಿ ಸಾಂವಿಧಾನಿಕ ತಿದ್ದುಪಡಿ ತರಲು ಯತ್ನಿಸಲಾಗುವುದು ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಕರ್ನಾಟಕ ವಿಧಾನಮಂಡಲ ಅಧಿವೇಶನದ ಆರಂಭದ ದಿನ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಭಾಷಣ ಮಾಡಲು ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸ್ಟಾಲಿನ್, ‘ಇದಕ್ಕೆ ಈಗಿರುವ ಏಕೈಕ ಪರಿಹಾರವೆಂದರೆ ವರ್ಷದ ಮೊದಲ ವಿಧಾನಮಂಡಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಪ್ರಾರಂಭಿಸುವ ಪರಿಪಾಠಕ್ಕೆ ಮಂಗಳ ಹಾಡುವುದು’ ಎಂದು ಹೇಳಿದರು.
ಮೊದಲು ತಮಿಳುನಾಡು. ನಂತರ ಕೇರಳ. ಈಗ ಕರ್ನಾಟಕ. ರಾಜ್ಯಪಾಲರು ಈ 3 ರಾಜ್ಯಗಳಲ್ಲೂ ಒಂದೇ ನಡೆ ಅನುಸರಿಸುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಸ್ಪಷ್ಟ. ರಾಜ್ಯ ಸರ್ಕಾರಗಳು ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸುವ ರಾಜ್ಯಪಾಲರು ಮತ್ತು ಪಕ್ಷದ ಏಜೆಂಟರಂತೆ ವರ್ತಿಸುತ್ತಾರೆ. ಚುನಾಯಿತ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸುವುದು ಅವರ ಉದ್ದೇಶ’ ಎಂದರು.


