ಹೊಸ ದಿಗಂತ ವರದಿ, ಮಂಗಳೂರು :
ಮಂಗಳೂರು ಕರಾವಳಿ ಉತ್ಸವ ಜನರ ಹೃದಯ ಬೆಸೆಯುವ ಉತ್ಸವವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ 50 ದಿನಗಳ ಕಾಲ ಆಯೋಜನೆಯಾಗಿರುವ ಕರಾವಳಿ ಉತ್ಸವಕ್ಕೆ ಶನಿವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಮೂಲಕ ಈ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ಸಿಎಂಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ವೈವಿಧ್ಯಮಯ ಕಾರ್ಯಕ್ರಮಗಳನ್ನೊಳಗೊಂಡು ನಡೆಯಲಿರುವ ಕರಾವಳಿ ಉತ್ಸವವು ಜನರ ನಡುವೆ ಹೃದಯಗಳನ್ನು ಬೆಸೆಯುವ ವೇದಿಕೆಯಾಗಲಿ. ಈ ಮೂಲಕ ಸಹಬಾಳ್ವೆಯ ಸಂದೇಶಭಾವ ಜನರ ಮನಸ್ಸಿನಲ್ಲಿ ಬೆಳೆಯಲಿ ಎಂದು ಗುಂಡೂರಾವ್ ಆಶಿಸಿದರು.
ನಾವೆಲ್ಲರೂ ಒಂದೇ ದೇಶದ ಮಕ್ಕಳು ಎನ್ನುವ ಭಾವನೆ ಎಲ್ಲರಲ್ಲೂ ಬೆಳೆಯಬೇಕು ಎಂಬ ಉದ್ದೇಶ ಕರಾವಳಿ ಉತ್ಸವದ ಹಿಂದಿದೆ. ಎಲ್ಲ ಬಗೆಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಬೆರೆತು ಪಾಲ್ಗೊಂಡಾಗ ಸಹೋದರತ್ವ, ಪ್ರೀತಿ, ವಿಶ್ವಾಸ ಬೆಳೆಯುತ್ತದೆ ಎಂದು ಸಚಿವರು ಹೇಳಿದರು.
ಕರಾವಳಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ 2 ಕೋಟಿ ರೂ.ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಉತ್ಸವಕ್ಕೆ ಸ್ಥಳೀಯವಾಗಿ ಧನ ಸಂಗ್ರಹ ಕಡಿಮೆಯಾದಾಗ ಸಿಎಂ ಸಿದ್ದರಾಮಯ್ಯ ಬಹುದೊಡ್ಡ ಮೊತ್ತದ ಅನುದಾನ ನೀಡಿದ್ದಾರೆ ಎಂದು ಸಚಿವ ಗುಂಡೂರಾವ್ ಹೇಳಿದರು.
ಶಾಸಕರಾದ ವೇದವ್ಯಾಸ ಕಾಮತ್, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಎಂ.ಎ. ಗಫೂರ್, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಮಮತಾ ಗಟ್ಟಿ, ಟಿ.ಎಂ. ಶಹೀದ್ ತೆಕ್ಕಿಲ್, ಸದಾನಂದ ಮಾವಜಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ನಗರ ಪೊಲೀಸ್ ಆಯುಕ್ತ ಸುಽರ್ ಕುಮಾರ್ ರೆಡ್ಡಿ, ಜಿಪಂ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಡಿಎಫ್‌ಒ ಆಂಟನಿ ಮರಿಯಪ್ಪ, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಕ್ ಮತ್ತಿತರರು ಉಪಸ್ಥಿತರಿದ್ದರು.

